ಮಣಿಪಾಲ: ನಗರದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಹೊಡೆದಾಡುವ ದೃಶ್ಯಾವಳಿ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆಪ್‌ನಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನ.08 ರಂದು ಮಣಿಪಾಲದ ಈಶ್ವರ ನಗರ ಎಪಿಕೋಡ್ ಸೆಂಟರ್ ಎದುರು ರಾಷ್ಟ್ರೀಯ ಹೆದ್ದಾರಿ 169(A) ರ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿದ್ದು, ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಈ ಬಗ್ಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದ ಮಣಿಪಾಲ ಪೊಲೀಸ್ ಠಾಣೆಯ ಸಿದ್ದೇಶಿ ಜಿ.ಆರ್ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿದಾಗ ಹೊಡೆದಾಟದಲ್ಲಿ ಭಾಗಿಯಾಗಿದ್ದವರ ಗುರುತು ಪತ್ತೆಯಾಗಿದೆ.
ಗುರುತು ಪತ್ತೆಯಾದವರು:
1) ಆರ್ಷ್ ಅಮಿತ್ ಶಂಕರ್, 2) ಉತ್ಕರ್ಷ್, 3) ವಿನಾಯಕ ಭಾರದ್ವಾಜ್, 4) ವೇದಾಂತ್ ಶಂಕರ್, 5) ಚೇತನ್, 6) ಅಕ್ಷತ್ ಸಿಂಗ್, 7) ಲಿನ್ ಪೊರ್ಡ್ ಲೆನಾಕ್ಸ್, 8) ಅನುರಾಗ್ ಮುಖರ್ಜಿ, 9) ಶುಭಂ ನಂದಿ, 10) ಅರ್ಜುನ್ ಶಾ, 11) ಪ್ರಜ್ವಲ್ ಹಾಗೂ ಇತರರು ಎಂದು ತಿಳಿದು ಬಂದಿದೆ.
ಇವರುಗಳು ರಾಷ್ಟ್ರೀಯ ಹೆದ್ದಾರಿ 169(A) ರ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಪರಸ್ಪರ ಹೊಡೆದಾಡಿ, ಹೆದ್ದಾರಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿ, ಸಾರ್ವಜನಿಕರ ನೆಮ್ಮದಿಗೆ ಭಂಗ ಹಾಗೂ ಸಾರ್ವಜನಿಕ ಭೀತಿ ಉಂಟುಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.





