Home Karnataka News ಖಾಸಗಿ ವಿಡಿಯೊ, ಚಿತ್ರ ಪ್ರಸಾರ ಇನ್ನು ಶಿಕ್ಷಾರ್ಹ ಅಪರಾಧ: ಎಫ್‌ಐಆ‌ರ್ ಕಡ್ಡಾಯ: ಗೃಹ ಇಲಾಖೆ

ಖಾಸಗಿ ವಿಡಿಯೊ, ಚಿತ್ರ ಪ್ರಸಾರ ಇನ್ನು ಶಿಕ್ಷಾರ್ಹ ಅಪರಾಧ: ಎಫ್‌ಐಆ‌ರ್ ಕಡ್ಡಾಯ: ಗೃಹ ಇಲಾಖೆ

ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಅಥವಾ ಆಪ್ತ ಚಿತ್ರಗಳು ಮತ್ತು ವಿಡಿಯೊಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಪ್ರಕರಣಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸೈಬರ್ ಅಪರಾಧಗಳು, ಬ್ಲಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ತಕ್ಷಣವೇ ಕಡ್ಡಾಯವಾಗಿ ಎಫ್‌ಐಆ‌ರ್ ದಾಖಲಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಇದರ ಬೆನ್ನಲ್ಲೇ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ರಾಜ್ಯದಾದ್ಯಂತ ಏಕರೂಪದ ಅನುಷ್ಠಾನಕ್ಕಾಗಿ ಸ್ಥಾಯಿ ಆದೇಶ 1061ರ ಅಡಿಯಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಯಾವುದೇ ಚಿತ್ರೀಕರಣದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ: ಸಂತ್ರಸ್ತರು ಆರಂಭದಲ್ಲಿ ಚಿತ್ರ ಅಥವಾ ವಿಡಿಯೊ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಸಹ, ಅದನ್ನು ಇತರರಿಗೆ ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ಇರದೇ ಇದ್ದ ಪಕ್ಷದಲ್ಲಿ ಅದನ್ನು ಪ್ರಚಾರಪಡಿಸುವುದು ಗಂಭೀರ ಅಪರಾಧವಾಗುತ್ತದೆ.

ಭಾರತೀಯ ನ್ಯಾಯ ಸಂಹಿತೆ2023ರ ಸೆಕ್ಷನ್ 77ರ ವಿವರಣೆ 2ರ ಪ್ರಕಾರ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.

ಬ್ಲಾಕ್‌ಮೇಲ್ ವಿಡಿಯೊಗಳು, ಸೆಕ್ಟೋರ್ಷನ್ ಮತ್ತು ರಿವೆಂಜ್ ಪೋರ್ನೊಗ್ರಫಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಬಂದ ತಕ್ಷಣ ಪೊಲೀಸರು ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆ‌ರ್ ದಾಖಲಿಸಬೇಕು.

ಪೂರ್ವಾನುಮತಿಯ ನೆಪವಿಲ್ಲ: ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ಒಡ್ಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಅಥವಾ ತಡ ಮಾಡುವಂತಿಲ್ಲ.

ಅಪರಾಧವು ಸ್ಥಳೀಯ ಠಾಣಾ ವ್ಯಾಪ್ತಿಯ ಹೊರಗೆ ನಡೆದಿದ್ದರೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಪ್ರಕಾರ ತಕ್ಷಣವೇ ಜೀರೊ ಎಫ್‌ಐಆರ್ ದಾಖಲಿಸಿ, ಬಳಿಕ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.