ಕಾರ್ಕಳ, ಜೂ. 28: ಪರವಾನಿಗೆ ಪಡೆಯದೇ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೂನ್ 27ರಂದು ಮಧ್ಯಾಹ್ನ ಸುಮಾರು 12:15ಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಲ್ಯಾ ಗ್ರಾಮದ ಹಾಳೆಕಟ್ಟೆ ಪ್ರದೇಶದಲ್ಲಿ ಬೆಳ್ಮಣ್‌ನಿಂದ ಕಾರ್ಕಳದ ಕಡೆಗೆ ಬರುತ್ತಿದ್ದ KL-14-J-4962 ಸಂಖ್ಯೆಯ ಟಿಪ್ಪರ್ ವಾಹನವನ್ನು ತಪಾಸಣೆ ನಡೆಸಿದರು.
ಪರಿಶೀಲನೆ ವೇಳೆ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಬೋಳ ಗ್ರಾಮದ ಬೋಳ ಪದವು ಪ್ರದೇಶದಿಂದ ಅಂದಾಜು ₹10,500 ಮೌಲ್ಯದ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಸಂಜೀವ ಎ., ವಾಹನದ ಮಾಲಕ ಸಂತೋಷ್ ಕುಮಾರ್, ಹಾಗೂ ಸಂತೋಷ್ ಮತ್ತು ಹರೀಶ್ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), 112(1) ಹಾಗೂ 3(5) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




