Home Crime ಪೊಲೀಸ್ ಕಾನ್‌ಸ್ಟೆಬಲ್‌ ಹತ್ಯೆ  ಪ್ರಕರಣ : ಆರೋಪಿಯ ಎನ್‌ಕೌಂಟರ್‌…!!

ಪೊಲೀಸ್ ಕಾನ್‌ಸ್ಟೆಬಲ್‌ ಹತ್ಯೆ  ಪ್ರಕರಣ : ಆರೋಪಿಯ ಎನ್‌ಕೌಂಟರ್‌…!!

ನಿಜಾಮಾಬಾದ್: ನಗರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ(ಜಿಜಿಹೆಚ್) ಬೆಳಗ್ಗೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ರಿಯಾಜ್ ಎಂಬ ರೌಡಿ ಶೀಟರ್ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್ ರಿಯಾಜ್ ಭಾನುವಾರ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದನು.

ಘರ್ಷಣೆಯಲ್ಲಿ ಗಾಯಗೊಂಡಿದ್ದ ರಿಯಾಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ರಿಯಾಜ್, ಕಾನ್‌ಸ್ಟೆಬಲ್‌ನ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳನ್ನು ರಕ್ಷಿಸಲು ಪೊಲೀಸರು ಗುಂಡು ಹಾರಿಸಿದರು, ಈ ಸಂದರ್ಭದಲ್ಲಿ ರಿಯಾಜ್ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಕಾನ್‌ಸ್ಟೆಬಲ್‌ನನ್ನು ಕೊಂದು ಇತರರನ್ನು ಗಾಯಗೊಳಿಸಿದ್ದ ಆರೋಪಿ, ಪೊಲೀಸರ ಬಂದೂಕನ್ನು ಕಸಿದುಕೊಳ್ಳಲು ಯತ್ನಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಲಾತಿಯಿತು. ಇಲ್ಲದಿದ್ದರೆ ಆಸ್ಪತ್ರೆಯೊಳಗೆ ರಕ್ತಪಾತವಾಗುತ್ತಿತ್ತು ಎಂದು ಹೈದರಾಬಾದ್‌ನಲ್ಲಿ, ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಶಿವಧರ್ ರೆಡ್ಡಿ ಅವರು ಹೇಳಿದ್ದಾರೆ.

ಶುಕ್ರವಾರ ಪೊಲೀಸ್ ಕಾನ್‌ಸ್ಟೆಬಲ್ ಇ. ಪ್ರಮೋದ್ ಅವರನ್ನು ಇರಿದು ಕೊಂದ ರಿಯಾಜ್, ನಂತರ ಮತ್ತೊಬ್ಬ ಅಧಿಕಾರಿ ಎಸ್‌ಐ ವಿಠಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಪೊಲೀಸ್ ದಾಖಲೆಗಳ ಪ್ರಕಾರ, ರಿಯಾಜ್ ನಿಜಾಮಾಬಾದ್ ಜಿಲ್ಲೆಯ ಏಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸುಮಾರು 37 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇತ್ತೀಚಿನ ತಿಂಗಳುಗಳಲ್ಲಿ ತನ್ನ ಅಪರಾಧ ಕೃತ್ಯಗಳನ್ನು ಹೆಚ್ಚಿಸುತ್ತಿದ್ದ ರಿಯಾಜ್ ಸಾವು ಇತರ ರೌಡಿ ಶೀಟರ್‌ಗಳಿಗೆ ಒಂದು ಗಂಭೀರ ಎಚ್ಚರಿಕೆಯಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.