ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ನಡೆದ ಘಟನೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವೇದಾಧ್ಯಯನ ಶಾಲೆಯ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ 9 ವರ್ಷದ ವಿದ್ಯಾರ್ಥಿ ತರುಣ್ ಮೇಲೆ ಕ್ರೌರ್ಯ ಮೆರೆದ ಘಟನೆ ತಿಳಿದು ಬಂದಿದೆ.
ಈ ವಿದ್ಯಾರ್ಥಿಯು ತನ್ನ ಅಜ್ಜಿಗೆ ಫೋನ್ ಮಾಡಿದುದನ್ನು ಪ್ರಶ್ನಿಸಿದ ಶಿಕ್ಷಕ, ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾರೆ. ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ
ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕ ನಾಪತ್ತೆಯಾಗಿದ್ದು, ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ತರುಣ್ ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿ ಆಗಿದ್ದು, ದೇಗುಲಕ್ಕೆ ಸೇರಿದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಜ್ಜಿಗೆ ಬೇರೆ ನಂಬರಿನಿಂದ ಕರೆ ಮಾಡಿದರೆ ಬಿಡುವುದಿಲ್ಲ ಎಂದು ಶಿಕ್ಷಕ ವೀರೇಶ್ ಬೆದರಿಕೆಯೊಡ್ಡಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಈ ಘಟನೆಯ ಕುರಿತು ಗುರು ತಿಪ್ಪೇಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



