Home Crime ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ : ನಾಲ್ವರು ಮೃತ್ಯು…!!

ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ : ನಾಲ್ವರು ಮೃತ್ಯು…!!

ಹೊಸಕೋಟೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌‍ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಸಂಭವಿಸಿದೆ ‌

ಸಾವನ್ನಪ್ಪಿದವರು ಆಂಧ್ರಪ್ರದೇಶದ ಕೇಶವಲುರೆಡ್ಡಿ (44),ತುಳಸಿ ಅಲಿಯಾಸ್‌‍ ತನು (21), ಹನ್ನೊಂದು ತಿಂಗಳ ಮಗು ಯತಿಕ್‌ ಮತ್ತು ತಿರುಪತಿಯ ಪ್ರಗತಿ (4) ಎಂದು ತಿಳಿದು ಬಂದಿದೆ.

ಆಂಧ್ರಸಾರಿಗೆ ಬಸ್‌‍ ತಿರುಪತಿಯಿಂದ ರಾತ್ರಿ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ಈ ಬಸ್‌‍ ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ತಾಲ್ಲೂಕಿನ ಗೊಟ್ಟಿಪುರ ಗೇಟ್‌ ಬಳಿ ಮುಂದೆ ತೆರಳುತ್ತಿದ್ದ ಲಾರಿಯನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬಸ್‌‍ ಚಾಲಕ ಮುನ್ನುಗ್ಗಿದ್ದಾನೆ. ಆ ವೇಳೆ ಲಾರಿಗೆ ಹಿಂದಿನಿಂದ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಸ್‌‍ನಲ್ಲಿದ್ದ ಪ್ರಯಾಣಿಕರಲ್ಲಿ 16 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ನಾಗರಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಬಸ್‌‍ನೊಳಗೆ ಸಿಕ್ಕಿಕೊಂಡು ಮೃತಪಟ್ಟ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಬಸ್‌‍ನ ಮುಂಭಾಗ ಹಾಗೂ ಮತ್ತೊಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ನಿದ್ದೆ ಮಂಪರಿನಲ್ಲಿ ಓವರ್‌ಟೇಕ್‌ ಮಾಡುವ ಭರದಲ್ಲಿ ಲಾರಿಗೆ ಡಿಕ್ಕಿ ಹೊಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಘಟನೆ ಬಗ್ಗೆ ಹೊಸಕೋಟೆ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.