Home Crime ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಕಾರು…!!

ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಕಾರು…!!

ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ಐಷಾರಾಮಿ ಕಾರುಗಳ ಹಾವಳಿ ಮತ್ತು ಶ್ರೀಮಂತರ ಮಕ್ಕಳ ಬೇಜವಾಬ್ದಾರಿತನಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು (KA 05 NR 0009) ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ, ಸೈಲೆನ್ಸರ್‌ನಿಂದ ಕರ್ಕಶ ಶಬ್ದದೊಂದಿಗೆ ಬೆಂಕಿ ಉಗುಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಸಂಚಾರಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಲ್ಯಾಂಬೋರ್ಗಿನಿ ಕಾರಿನ ಸೈಲೆನ್ಸರನ್ನು ಕಾನೂನುಬಾಹಿರವಾಗಿ ಮಾರ್ಪಾಡು (Modify) ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಕಾರಿನ ವೇಗವನ್ನು ಹೆಚ್ಚಿಸಿದಾಗ ಕಿವಿಗಡಚಿಕ್ಕುವಂತಹ ಕರ್ಕಶ ಶಬ್ದದೊಂದಿಗೆ ಸೈಲೆನ್ಸರ್‌ನಿಂದ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಈ ದೃಶ್ಯಾವಳಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು, ಘಟನೆ ಯಾವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಳ್ಳಲು ಪೊಲೀಸರು ಪ್ರಾಥಮಿಕ ಸಿದ್ಧತೆ ಕೈಗೊಂಡಿದ್ದಾರೆ.

ಚಾಲನಾ ಸೀಟಿನಲ್ಲಿದ್ದದ್ದು ಯಾರು? ತನಿಖೆ ಚುರುಕು
ಈ ಘಟನೆ ಭದ್ರತಾ ದೃಷ್ಟಿಯಿಂದ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಸದ್ಯ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಈ ಕೃತ್ಯ ನಡೆದಿದ್ದು ಯಾವಾಗ? ಮತ್ತು ಆ ಸಮಯದಲ್ಲಿ ಚಾಲನಾ ಸೀಟಿನಲ್ಲಿ ಇದ್ದದ್ದು ಯಾರು? ಸ್ವತಃ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿದ್ದರೇ ಅಥವಾ ಬೇರೆ ಯಾರಾದರೂ ಇದ್ದರೇ? ಎಂಬ ಬಗ್ಗೆ ಸಿಸಿಟಿವಿ ಹಾಗೂ ವೈರಲ್ ವಿಡಿಯೋಗಳ ಸೂಕ್ಷ್ಮ ಪರಿಶೀಲನೆ ನಡೆಯುತ್ತಿದೆ.

ರಿಕ್ಕಿ ರೈ ಅವರ ಲ್ಯಾಂಬೋರ್ಗಿನಿ ಕಾರು ಇಂತಹ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮಾರ್ಚ್ 21 ರಂದು ನಗರದ ಪ್ರಮುಖ ರಸ್ತೆಗಳಾದ ಅನಿಲ್ ಕುಂಬ್ಳೆ ವೃತ್ತ ಹಾಗೂ ಕಬ್ಬನ್ ರಸ್ತೆಯಲ್ಲಿ ಇದೇ ಕಾರನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಡ್ರಿಫ್ಟಿಂಗ್‌  ಮಾಡಲಾಗಿತ್ತು. ಅಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸ್ವತಃ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಆ ಘಟನೆಯ ಬೆನ್ನಲ್ಲೇ ಇದೀಗ ಏರ್‌ಪೋರ್ಟ್ ರಸ್ತೆಯಲ್ಲೂ ನಿಯಮ ಗಾಳಿಗೆ ತೂರಿ ಸಾರ್ವಜನಿಕರ ಜೀವಕ್ಕೆ ಅಪಾಯ ತರುವಂತೆ ಕಾರು ಚಲಾಯಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.