ಪಡುಬಿದ್ರಿ: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪಣಿಯೂರು ಕುಂಜೂರು ರೈಲು ಹಳಿಯಲ್ಲಿ ನಡೆದಿದೆ.
ಮೃತರನ್ನು ರಾಜಸ್ಥಾನದ ದವಕಿಶನ್ ಬಾಂಬು(17) ಎಂದು ಗುರುತಿಸಲಾಗಿದೆ.
ಈತ ಶಾಲೆಯ ರಜೆಯ ಹಿನ್ನೆಲೆಯಲ್ಲಿ ಕುಮಟಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದ ಎನ್ನಲಾಗಿದೆ.
ದಾರಿ ಮಧ್ಯೆ ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದ ಬಾಂಬು, ಬಳಿಕ ರೈಲ್ವೇ ಹಳಿ ಬಳಿ ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ರೈಲು ಆತನಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಂಬು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮೃತದೇಹವನ್ನು ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್, ಎಸ್‌ಡಿಪಿಐ ಆಂಬುಲೆನ್ಸ್ ಚಾಲಕ ಹಮೀದ್, ತೌಫೀಕ್, ರೈಫ್, ಹಸನ್ ಕುಂಜೂರು, ಸುಜಿತ್ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲು ಸಹಕರಿಸಿದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.