ಕಡಬ : ಕೋಡಿಂಬಾಳದ ಕೋರಿಯರ್‌ಬಳಿ ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ (ನೆಟ್ಟಣ) ದತ್ತ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ಬಿದ್ದು ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ಚೋಮ (85) ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಚೋಮ ಅವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲವಾದ್ದರಿಂದ ರೈಲು ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಅವರು ಆಕಸ್ಮಿಕವಾಗಿ ರೈಲಿನಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಅವರ ಪುತ್ರ ರಾಘವ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.




