ಮಂಗಳೂರು : ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡದ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಕೆಟ್ಟದ್ದಾಗಿ ಕಮೆಂಟ್ ಹಾಕಿದ ಇಬ್ಬರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಝಿ ಉಸ್ತಾದರು ನಿಧನರಾದ ಹಿನ್ನೆಲೆಯಲ್ಲಿ ಅವರ ಧಾರ್ಮಿಕ ಬೋಧನೆಯ ವೀಡಿಯೊ ಸಾಮಾಜಿಕ ಜಾಲಾ ತಾಣ ಫೇಸ್‌ಬುಕ್‌ನ ʼವಾರ್ತಾಭಾರತಿʼಯ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದನ್ನು ವೀಕ್ಷಿಸಿದ ವಿಶ್ವೇಶ್ವರ ಭಟ್ ಮತ್ತು ಕ್ಲೇರಾ ರೂಫ್67 ಎಂಬವರು ಕೆಟ್ಟದ್ದಾಗಿ ಖಾಝಿ ಅವರ ಬಗ್ಗೆ ಕಮೆಂಟ್ ಹಾಕಿದ್ದರು.
ವಿಶ್ವೇಶ್ವರ ಭಟ್ ಮತ್ತು ಕ್ಲೇರಾ ರೂಫ್67 ಅವರು ಮುಸ್ಲಿಮ್ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶದಿಂದ , ಧರ್ಮ ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಕಮೆಂಟ್ ಹಾಕಿರುವುದಾಗಿ ಅಬ್ದುಲ್ ರಶೀದ್ ಎಂಬವರು ಜೂ.24ರಂದು ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿರುವ ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




