ಉಡುಪಿ: ನಗರದ ಸಮೀಪ ಯುವಕನೋರ್ವನ ಮನೆಗೆ ಹಣದ ವಿಚಾರದಲ್ಲಿ ಮೂರು ಮಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿ ಚಿನ್ನದ ಚೈನ್ ಕಸಿದು ಕೊಂಡು ಹೋದ ಘಟನೆ ಸಂಭವಿಸಿದೆ.
ಹಲ್ಲೆ ಮಾಡಿದ ಆರೋಪಿಗಳು ಆದರ್ಶ, ಗೌರವ್ ಹಾಗೂ ತರುಣ್ ಎಂದು ಗುರುತಿಸಲಾಗಿದೆ.
ಹಲ್ಲೆಗೊಳಾದ ಯುವಕ ಜೀವಿತ್ ಕಾರ್ಡೊಜಾ ಎಂದು ತಿಳಿಯಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ದಿನಾಂಕ 09/09/2025 ರಂದು ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿದಾರರಾದ ಜೀವಿತ್ ಕಾರ್ಡೊಜಾ (19), ಪುತ್ತೂರು ಗ್ರಾಮ, ಉಡುಪಿ ಇವರಿಗೆ ಪರಿಚಯವಿರುವ ಅರೋಪಿತರುಗಳಾದ ಕಟಪಾಡಿಯ ಆದರ್ಶ ಆತನ ತಮ್ಮ ಗೌರವ್ ಹಾಗೂ ತರುಣ್ ರವರು ಎರಡು ಬುಲೆಟ್ ಬೈಕ್ ನಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಮನೆಯ ಬಾಗಿಲನ್ನು ಬಡಿದಾಗ ಮನೆಯ ಬಾಗಿಲನ್ನು ತೆರೆದ ಪಿರ್ಯಾದಿದಾರರ ತಾಯಿಯನ್ನು ಆರೋಪಿತರು ದೂಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಇದ್ದ ಪಿರ್ಯಾದಿದಾರರನ್ನು ಮನ ಬಂದಂತೆ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿತರನ್ನು ತಡೆಯಲು ಬಂದ ಪಿರ್ಯಾದಿದಾರರ ತಂದೆಯನ್ನು ದೂಡಿ ಅವರ ಕೆನ್ನೆಗೆ ಹೊಡೆದರು. ನಂತರ ಆರೋಪಿತರು ಪಿರ್ಯಾದಿದಾರರನ್ನು ನೆಲಕ್ಕೆ ಬೀಳಿಸಿ ಎದೆಗೆ ಬೆನ್ನಿಗೆ ಕಾಲಿನಿಂದ ತುಳಿದು, ಅಲ್ಲೆ ಇದ್ದ ಫ್ಯಾನ್ ರೆಕ್ಕೆಯಿಂದ ಕುತ್ತಿಗೆಗೆ ಹೊಡೆದು ಗಾಯವಾಗಿ ರಕ್ತ ಸ್ರಾವ ಆಗಿರುತ್ತದೆ. ಅಲ್ಲದೇ ಅವರ ಕುತ್ತಿಗೆಯಲ್ಲಿದ್ದ 16 ಗ್ರಾಂ ನ ಚೈನನ್ನು ಕಸಿದುಕೊಂಡು ನನ್ನ ಬಡ್ಡಿಹಣವನ್ನು ನೀಡಿ ಅದನ್ನು ತಗೊಂಡು ಹೋಗು ಎಂದಿರುತ್ತಾರೆ.
ಈ ಹಲ್ಲೆಗೆ ಪಿರ್ಯಾದಿದಾರರು ಆರು ತಿಂಗಳ ಹಿಂದೆ ಆರೋಪಿತರ ಬಳಿ ತೆಗೆದುಕೊಂಡಿದ್ದ ಸಾಲದ ಮೇಲಿನ ಹೆಚ್ಚಿನ ಬಡ್ಡಿಯ ಹಣವನ್ನು ಕಟ್ಟಿಲ್ಲವೆಂಬುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 169/2025, ಕಲಂ: 329(3), 329(4), 115(2), 118(1), 304(2), 352, 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.