ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷರು ಹಾಗೂ ಅವರ ಸಹಚರರು ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ಸಮಿತಿ, ಹಿರಿಯಡಕ ಇದರ ವತಿಯಿಂದ ಹಿರಿಯಡಕದ ಗ್ರಾಪಂ ವಠಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯಮ, ಫ್ಯಾಕ್ಟರಿ ಆರಂಭಿಸಲು ಹೊರ ಊರಿಗಳಿಂದ ಸಾಕಷ್ಟು ಹೂಡಿಕೆದಾರರು ಬರುತ್ತಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದಲ್ಲದೆ, ಊರಿನ ಅಭಿವೃದ್ಧಿ ಕೂಡ ಆಗುತ್ತದೆ. ಆದರೆ ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷ ಉದ್ಯಮಿಗಳಿಗೆ ಬೆದರಿಕೆ ಒಡ್ಡುವುದು, ಬಲತ್ಕಾರವಾಗಿ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹರೀಶ್ ಕಿಣಿ ಅಲೆವೂರು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಸಮಿತಿ ಸದಸ್ಯ ಡಾ. ಸಂತೋಷ್ ಕುಮಾರ್ ಭೈರಂಪಳ್ಳಿ ಮಾತನಾಡಿ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ ಬಲ್ಲಾಳ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಅಧ್ಯಕ್ಷ ಚರಣ್ ವಿಠಲ, ಬೊಮ್ಮರಬೆಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಪೂಜಾರಿ, ಮುಖಂಡರಾದ ಪುಷ್ಪಾ ಅಂಚನ್, ಸಹನಾ ಕಾಮತ್, ಲಕ್ಷ್ಮೀನಾರಾಯಣ ಪ್ರಭು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

