Home Latest 2026ರಿಂದ 10ನೇ ತರಗತಿಗೆ ವರ್ಷಕ್ಕೆ 2 ಬಾರಿ ಮಂಡಳಿ ಪರೀಕ್ಷೆ : ಸಿಬಿಎಸ್‌ಇ…!!

2026ರಿಂದ 10ನೇ ತರಗತಿಗೆ ವರ್ಷಕ್ಕೆ 2 ಬಾರಿ ಮಂಡಳಿ ಪರೀಕ್ಷೆ : ಸಿಬಿಎಸ್‌ಇ…!!

ಹೊಸದಿಲ್ಲಿ: ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಅವರು ಫೆಬ್ರವರಿಯಲ್ಲಿ ನಡೆಯುವ ಮೊದಲ ಹಂತದ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

ಮೇ ತಿಂಗಳಲ್ಲಿ ನಡೆಸಲಾಗುವ ಎರಡನೇ ಹಂತದ ಪರೀಕ್ಷೆಯು ತಮ್ಮ ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಶಿಫಾರಿಸಿಗೆ ಅನುಗುಣವಾಗಿ 10ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಮಂಡಳಿ ಪರೀಕ್ಷೆಗಳನ್ನು ನಡೆಸುವ ನಿಯಮಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅನುಮೋದಿಸಿದೆ.

ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ಹಾಗೂ ಎರಡನೇ ಹಂತದ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಲಾಗುವುದು. ಎರಡೂ ಹಂತಗಳ ಫಲಿತಾಂಶವನ್ನು ಕ್ರಮವಾಗಿ ಎಪ್ರಿಲ್ ಹಾಗೂ ಜೂನ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಸಾಮಾಜಿಕ ವಿಜ್ಞಾನ ಹಾಗೂ ಭಾಷೆಗಳ ಪೈಕಿ ಮೂರರ ವರೆಗಿನ ವಿಷಯಗಳಲ್ಲಿ ತಮ್ಮ ಫಲಿತಾಂಶವನ್ನು ಸುಧಾರಿಸುವ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.