Home Crime ಮತಪತ್ರ ತಿದ್ದಿದ ಆರೋಪ : ಶಾಸಕ ಜೀವರಾಜ್‌ ವಿರುದ್ಧದ ಎಫ್ಐಆರ್‌ಗೆ ತಡೆ…!!

ಮತಪತ್ರ ತಿದ್ದಿದ ಆರೋಪ : ಶಾಸಕ ಜೀವರಾಜ್‌ ವಿರುದ್ಧದ ಎಫ್ಐಆರ್‌ಗೆ ತಡೆ…!!

ಬೆಂಗಳೂರು: ಮರು ಮತ ಎಣಿಕೆ ವೇಳೆ ಮತಪತ್ರಗಳನ್ನು ತಿದ್ದಿದ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಶಾಸಕ ಡಿ.ಎನ್‌.ಜೀವರಾಜ್‌ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಜೀವರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಜೀವರಾಜ್ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, “ಗೊಂದಲಗಳಿದ್ದರೆ ಚುನಾವಣಾ ತಕರಾರು ಅರ್ಜಿಯಲ್ಲೇ ಉಲ್ಲೇಖಿಸಬೇಕಿತ್ತು. ರಾಜಕೀಯ ಒತ್ತಡದಿಂದ ದೂರು ದಾಖಲಿಸುವುದು ಸರಿಯಲ್ಲ. ಹೀಗಾದರೆ, ಯಾವ ಅಧಿಕಾರಿಯೂ ಸ್ವತಂತ್ರವಾಗಿ ಕೆಲಸ ಮಾಡಲಾಗುವುದಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಇದೇ 7ರವರೆಗೆ ಎಫ್ಐಆರ್ ಗೆ ತಡೆ ವಿಚಾರಣೆ ಮುಂದೂಡಿತು.

‘2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ಜೀವರಾಜ್‌, ಈ ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್‌ ಸಂಚು ರೂಪಿಸಿ ಮತಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡ ಅವರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಏಜೆಂಟ್‌ ಸುಧೀರ್‌ ಕುಮಾರ್‌ ಮುರೊಳ್ಳಿ 2026ರ ಮೇ 3ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.