ಉಡುಪಿ : ರಕ್ತದಾನ, ಪ್ರಥಮ ಚಿಕಿತ್ಸೆಯ ಜೊತೆಗೆ, ಪ್ರಕೃತಿ ವಿಕೋಪ, ಪ್ರವಾಹದಂತಹ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಅಭೂತಪೂರ್ವ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಸಂಕಷ್ಟಗಳಿಗೆ ಸ್ಪಂದಿಸುವುದೇ ರೆಡ್‌ಕ್ರಾಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್‌ಭವನದ ಜೀನ್ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ನಡೆದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಜಗತ್ತಿನ ಶಾಂತಿ ಕಾಪಾಡುವಲ್ಲಿ ರೆಡ್‌ಕ್ರಾಸ್ ಕೊಡುಗೆ ಸದಾ ಸ್ಮರಣೀಯ. ರೆಡ್‌ಕ್ರಾಸ್ ಸಂಸ್ಥೆಯು ನ್ಯಾಯಯುತವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಾ ಬಂದಿದ್ದೂ, ಇದು ನಿಜಕ್ಕೂ ಶ್ಲಾಘನೀಯ. ಶಾಂತಿ ಮತ್ತು ಮಾನವೀಯತೆಯ ಕಡೆಗೆ ಪ್ರತಿಯೊಬ್ಬರ ಒಲವಿರಬೇಕು. ಒಬ್ಬರ ಒಳ್ಳೆಯ ಯೋಚನೆಗಳಿಂದ ಸಮಾಜದಲ್ಲಿ ಅನೇಕ ಒಳ್ಳೆಯ ಬದಲಾವಣೆಯನ್ನು ತರಲು ಸಾಧ್ಯ ಎಂದ ಅವರು, ಸಮಾಜಮುಖಿ ಸೇವೆಗೆ ರೆಡ್‌ಕ್ರಾಸ್ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಜಗತ್ತಿನಲ್ಲಿ ಮಾನವೀಯತೆಯ ಸೇವೆಯನ್ನು ಸಲ್ಲಿಸಿದ ಅತೀ ದೊಡ್ಡ ಸಂಸ್ಥೆ ಎಂದು ಹೆಸರು ಗಳಿಸಿರುವ ರೆಡ್‌ಕ್ರಾಸ್ ಸಂಸ್ಥೆಯು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ನೀಡಿಕೊಂಡು ಬಂದಿದ್ದು, ಪ್ರತಿಯೊಬ್ಬರು ರೆಡ್‌ಕ್ರಾಸ್ ಸಂಸ್ಥೆಯಿಂದ ದೊರಕುವ ಸೇವೆ-ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಡಾ. ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕಿ ಡಾ. ದಿವ್ಯ ಎಂ.ಎಸ್ ಭಾರತೀಯ ರೆಡ್‌ಕ್ರಾಸಿನ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನಿತ್ಯಾನಂದ ಒಳಕಾಡು, ನಿರುಪಮಾ ಪ್ರಸಾದ್ ಮತ್ತು ಭಾರತಿಯವರನ್ನು ಸನ್ಮಾನಿಸಲಾಯಿತು.
15 ಫಲಾನುಭವಿಗಳಿಗೆ ಗಾಲಿಕುರ್ಚಿ, 10 ಫಲಾನುಭವಿಗಳಿಗೆ ಶ್ರವಣಸಾಧನ, 10 ಫಲಾನುಭವಿಗಳಿಗೆ ಗೃಹಪಯೋಗಿ ವಸ್ತುಗಳನ್ನು ಹಾಗೂ ವಿವಿಧ ಶಾಲಾ ಕಾಲೇಜುಗಳಿಗೆ ಪ್ರಥಮ ಚಿಕಿತ್ಸಾ ಕಿಟ್ಟನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಉಪಸಭಾಪತಿ ಅಶೋಕ್ ಕುಮಾರ್ ವೈ.ಜಿ, ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ನಿಕಟ ಪೂರ್ವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿ, ಗೌರವ ಖಜಾಂಚಿ ರಮಾದೇವಿ ವಂದಿಸಿದರು.