ಬ್ರಹ್ಮಾವರ: ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ₹14.67 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ದಿನಾಂಕ 06.03.2026 ರಂದು ಸಂಜೆ 7:45ರಿಂದ ರಾತ್ರಿ 10:15ರ ನಡುವೆ, ಹೇರಾಡಿ ಗ್ರಾಮದ ಐಟಿಐ ಕಾಲೇಜು ಸಮೀಪ ವಾಸವಾಗಿರುವ 77 ವರ್ಷದ ಯಂ. ಮಂಜುನಾಥ ರಾವ್ ಅವರು ತಮ್ಮ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿ, ಬೆಡ್‌ರೂಮ್‌ನಲ್ಲಿದ್ದ ಗೋಡ್ರೇಜ್ ಅಲ್ಮಾರಿಯನ್ನು ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಕಳವಾದ ವಸ್ತುಗಳಲ್ಲಿ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್ (47 ಗ್ರಾಂ), ಎರಡು ಮುತ್ತಿನ ಬಳೆಗಳು (32 ಗ್ರಾಂ), ಚಿನ್ನದ ಬೆಂಡೋಲೆಗಳು, ಉಂಗುರ ಸೇರಿದಂತೆ ಒಟ್ಟು ಸುಮಾರು ₹14,67,000 ಮೌಲ್ಯದ ಆಭರಣಗಳು ಹಾಗೂ ₹49,000 ನಗದು ಸೇರಿವೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಹಾಗೂ ಪಿಎಸ್ಐ ಅಶೋಕ್ ಮಾಳಾಬಗಿ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿತು.
ಬಂಧಿತ ಆರೋಪಿಯನ್ನು ಪ್ರವೀಣ್ ಕುಮಾರ್ ಕೆ (ಬಾರಕೂರು ನಿವಾಸಿ) ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹7,500 ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.





