ಬಂಟ್ವಾಳ : ಗಣೇಶೋತ್ಸವಕ್ಕೆ ಹಾಕಿದ್ದ ಬ್ಯಾನರ್ ಹರಿದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಓರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಫರಂಗಿಪೇಟೆಯ ನಿವಾಸಿಯಾದ ಹೈದರ್ ಎಂದು ಗುರುತಿಸಲಾಗಿದೆ.
ಬಂಟ್ವಾಳ ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ ಎನ್ನುವವರು ಪರಂಗಿಪೇಟೆ ಸೇವಾಂಜಲಿ ಭವನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರನ್ನು, ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು, ದಿನಾಂಕ: 25.08.2025 ರಂದು ರೂ 3,500/- ವೆಚ್ಚದಲ್ಲಿ ಪರಂಗಿಪೇಟೆಯ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿರುತ್ತಾರೆ.
ಸದ್ರಿ ಬ್ಯಾನರನ್ನು ದಿನಾಂಕ 27.08.2025 ರಂದು ರಾತ್ರಿ ವೇಳೆ, ಫರಂಗಿಪೇಟೆಯ ನಿವಾಸಿಯಾದ ಹೈದರ್ ಎಂಬಾತನು ಹರಿದು ಹಾಕಿದ್ದಾನೆ. ಈ ಕೃತ್ಯದಿಂದಾಗಿ ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ ಕೂಡಾ, ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಭೀತಿಯನ್ನುಂಟು ಮಾಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿ ಹೈದರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.