ಕಾಸರಗೋಡು : ರಬ್ಬರ್ ಗೆ ಬಳಸುವ ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮೂವರು ಸಾವನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗೋಪಿ (58) , ಪತ್ನಿ ಇಂದಿರಾ (54) ,ಪುತ್ರ ರಂಜೇಶ್ (34) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ (27) ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರ್ಥಿಕ ಮುಗ್ಗಟ್ಟು ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ. ಸಂಬಂಧಿಕರೋರ್ವರ ಮೊಬೈಲ್‌ಗೆ ಕರೆ ಬಂದಿದ್ದು, ತಮ್ಮನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರೆನ್ನಲಾಗಿದೆ. ರಂಜೇಶ್ ಈ ಕರೆ ಮಾಡಿದ್ದಾನೆ ಎನ್ನಲಾಗಿದೆ.
ಸಂಬಂಧಿಕರು ಹಾಗೂ ನಾಗರಿಕರು ತಲುಪಿ ಆಸ್ಪತ್ರೆಗೆ ತಲಪಿಸಿದರೂ ಮೂವರೂ ಮೃತಪಟ್ಟಿದ್ದರು. ರಂಜೇಶ್ ಹಾಗೂ ರಾಕೇಶ್ ಈ ಹಿಂದೆ ದುಬೈಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದು, ಉದ್ಯಮ ನಡೆಸುತ್ತಿದ್ದರು. ಇದು ಯಶಸ್ವಿ ಯಾಗಲಿಲ್ಲ. ಇದರಿಂದ ಸಾಲದ ಹೊರೆ ಹೆಚ್ಚಿತ್ತು ಎನ್ನಲಾಗಿದೆ. ಉದ್ಯಮ ನಿಲ್ಲಿಸಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ದಿನಗಳ ಹಿಂದೆ ಇವರು ಸಂಬಂಧಿಕರ ಮನೆಗಳಿಗೆ ಹಾಗೂ ಕ್ಷೇತ್ರ ದರ್ಶನಕ್ಕೆ ತೆರಳಿದ್ದರು. ಅಂಬಲತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.