ಬಂಟ್ವಾಳ: ಇರಾ ಗ್ರಾಮದ ಕಂಚಿನಡ್ಕ ಪದವು ಪ್ರದೇಶದಲ್ಲಿ ನಡೆದಿದ್ದ ದನ ಕಳವು ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ 23ರಂದು ಸುಮಾರು 12,000 ರೂ. ಮೌಲ್ಯದ ದನ ಕಾಣೆಯಾಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆಗಸ್ಟ್ 25ರಂದು ಮಂಗಳೂರಿನ ಅಜಾದ್ ನಗರದ ಆರೋಪಿ ಇರ್ಷಾದ್ ಎಂಬಾತನನ್ನು ಬಂಧಿಸಿದ್ದಾರೆ.
ಈತ ದಕ್ಷಿಣ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ 15 ಕ್ಕೂ ಹೆಚ್ಚು ದನ ಸಾಗಾಟ ಮತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣವನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಆರುಣ್ ಕೆ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರಡ್ಡಿ, ಬಂಟ್ವಾಳ ಡಿವೈಎಸ್‌ಪಿ ವಿಜಯಪುಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಶಿವಕುಮಾರ ಬಿ. ನೇತೃತ್ವದಲ್ಲಿ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಪಿಎಸ್ ಮಂಜುನಾಥ್ ಟಿ, ಪಿಎಸ್ ಕೃಷ್ಣಕಾಂತ್ ಪಾಟೀಲ್, ಹೆಡ್ ಕಾನ್ಸ್‌ಟೆಬಲ್‌ಗಳು ಪ್ರಶಾಂತ್, ಲೋಕೇಶ್, ಕೃಷ್ಣ ನಾಯ್ಕ್ ಹಾಗೂ ಪಿಸಿ ಮಾರುತಿ, ಹಾಲೇಶಪ್ಪ ಭಾಗವಹಿಸಿದ್ದರು.