ಗಂಗೊಳ್ಳಿ: ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿ ಬಂಧನದ ವೇಳೆ ಗಂಗೊಳ್ಳಿ ಸಮೀಪ ರೆಸಾರ್ಟ್ ಒಂದರ ರೂಮ್ ನಲ್ಲಿ ಯುವತಿ ಇರುವ ಮಾಹಿತಿ ನೀಡಿರುವ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂದು ಗುರುತಿಸಲಾಗಿದೆ. ಈತ ವೇಶ್ಯಾವಾಟಿಕೆ ದಂಧೆಯ ಕಿಂಗ್ ಪಿನ್ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.
ಮಹಿಳೆ ಸೇರಿದಂತೆ ಇಬ್ಬರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಪ್ರಕರಣದ ವಿವರ: ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಯೊಬ್ಬ ದಿನಾಂಕ 25/08/2025 ರಂದು ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನ ತ್ರಾಸಿ ಬೀಚ್ ಬಳಿ ಇರುವ ರೆಸಾರ್ಟ್‌ನ ರೂಮ್ ನಂಬರ್ 108 ರಲ್ಲಿ ಯುವತಿಯನ್ನು ಕಳುಹಿಸಿ ಕೊಟ್ಟಿದ್ದ ಮಾಹಿತಿ ಬಂದ ಮೇರೆಗೆ ಲೇಶ್ ಗಣಪತರಾವ್ ಚೌವ್ಹಾಣ, ಪೊಲೀಸ್ ವೃತ್ತ ನಿರೀಕ್ಷಕರು(ಪ್ರಭಾರ), ಬೈಂದೂರು ವೃತ್ತ ಇವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಸಂತ್ರಸ್ಥೆ ಹಾಗೂ ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಸಂತ್ರಸ್ಥೆಯನ್ನು ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತನು ಕೆಲಸ ಕೊಡಿಸುವುದಾಗಿ ಕರೆಯಿಸಿ ತನ್ನಿಂದ ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿರುವುದಾಗಿ ತಿಳಿಸಿರುತ್ತಾಳೆ. ವಶಕ್ಕೆ ಪಡೆದ ವ್ಯಕ್ತಿಗಳಿಂದ 2 ಮೊಬೈಲ್ ಪೋನ್ ಹಾಗೂ KA-20-Z-0074 ನೇ ನಂಬರ್‌ನ ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಆರೋಪಿತ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತನು ಸಂತ್ರಸ್ಥ ಮಹಿಳೆಯ ಮೂಲಕ ದುರ್ವ್ಯಾಪಾರ ನಡೆಸಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುತ್ತಿರುವುದಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2025 ಕಲಂ:143 BNS, ಕಲಂ:3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.
