ಉದ್ಯಾವರ : ಉದ್ಯಾವರ ಕುತ್ಪಾಡಿ ಸಂಗಮ ಸಾಂಸ್ಕೃತಿ ವೇದಿಕೆ ಇದರ ಸಾರ್ವಜನಿಕ ಶ್ರೀ ಗಣೇಶ ಸಮಿತಿಯ ಮೂರನೇ ವರ್ಷದ ಗಣೇಶೋತ್ಸವವು ಕುತ್ಪಾಡಿ ಮಾoಗೋಡು ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 27 ಮತ್ತು 28 ರಂದು ವಿಜೃಂಭಣೆಯಿಂದ ಜರುಗಲಿದೆ.
ಅಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ಗಣಪತಿ ಪ್ರತಿಷ್ಠೆ, ಗಣ ಹೋಮ, ಮಧ್ಯಾಹ್ನ ಮಹಾಪೂಜೆ, ಮಧ್ಯಾಹ್ನ 3 ಗಂಟೆಯಿಂದ ಭಜನೆ, ಕುಣಿತ ಭಜನೆ, ಸಂಜೆ ಏಳು ಗಂಟೆಗೆ ರಂಗ ಪೂಜೆ ಜರುಗಲಿದೆ. 28ರಂದು ಬೆಳಿಗ್ಗೆ ಗಂಟೆ 9:30ಕ್ಕೆ ಗಣ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಬಳಿಕ ಭಜನೆ, ಸಂಜೆ 4 ಗಂಟೆಗೆ ಶ್ರೀ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಉದ್ಯಾವರ ಗಣಪತಿ ದೇವಸ್ಥಾನದವರೆಗೆ ಸಾಗಿ, ಕುತ್ಪಾಡಿ ಮಾಂಗೋಡು ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ 17 ವರ್ಷಗಳಲ್ಲಿ ಉದ್ಯಾವರ ಮತ್ತು ಕುತ್ಪಾಡಿ ಅಸುಪಾಸಿನಲ್ಲಿ ಜಾತಿ ಮತ ಪಕ್ಷ ಭೇದವಿಲ್ಲದೆ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಸಂಗಮ ಸಾಂಸ್ಕೃತಿಕ ವೇದಿಕೆಯು, ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮೂಲಕ ಗಣೇಶೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದೆ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮತ್ತು ಕಲಿಕಾ ಪರಿಕರಗಳ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಸ್ಥಳೀಯ ಆಶಕ್ತ ಬಡ ಕುಟುಂಬಗಳಿಗೆ ಮನೆ ಕಟ್ಟಲು ಆರ್ಥಿಕ ನೆರವು, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು ಹೀಗೆ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.
ಗ್ರಾಮದ ಪ್ರಮುಖ ರಸ್ತೆಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಈ ಸಂಘಟನೆಯ, ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಕ್ರೀಡಾಕೂಟವಾಗಿರುವ ‘ಕೆಸರ್ದ ಗೊಬ್ಬು’ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ನೆರವೇರಿಸುತ್ತಿದೆ. ಸಂಗಮ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಸಂಗಮ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ತಂಡ, ನಾಟಕ ಕಲಾವಿದರ ತಂಡ, ಸಂಗಮ ಕರಾಟೆ ತರಬೇತಿ, ಸೇವಾ ಸಹಕಾರಿ ಸಂಸ್ಥೆ, ನಾಸಿಕ್ ಬ್ಯಾಂಡ್ ಮತ್ತು ಯುವ ಬ್ರಿಗೇಡ್ ಹೀಗೆ ಹಲವಾರು ರೀತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
