ಕಡಬ: ಪ್ರೀತಿಯ ವಿಚಾರವಾಗಿ ಮಾತನಾಡಲು ಹೋದ ಮಹಿಳೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆ ಮಹಿಳೆಯು ಕಳೆದ ಮೂರು ವರ್ಷಗಳಿಂದ ದೇವಸ್ಥಾನವೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ಅಲ್ಲಿನ ಪ್ರಭಾಕರ ಎಂಬಾತನ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೀತಿಯ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಷಯದ ಬಗ್ಗೆ ಚರ್ಚಿಸಲು ಏಪ್ರಿಲ್ 3ರಂದು ರಾತ್ರಿ ಮಹಿಳೆಯು ಐತ್ತೂರು ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ಪ್ರಭಾಕರನ ಮನೆಗೆ ತೆರಳಿದ್ದರು.
ಮನೆಯಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆ ವ್ಯಕ್ತಿಯು ಏಕಾಏಕಿ ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಹಿಳೆಯನ್ನು ಕೆಳಗೆ ತಳ್ಳಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆ ಕಿರುಚಿಕೊಂಡಾಗ ನೆರೆಹೊರೆಯವರು ಬರುವುದನ್ನು ಕಂಡು, “ಇನ್ನೊಮ್ಮೆ ನನ್ನ ಸುದ್ದಿಗೆ ಬಂದರೆ ಸುಮ್ಮನೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಕಡಬ ಪೊಲೀಸರು ಆರೋಪಿ ಪ್ರಭಾಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





