ಮಂಗಳೂರು : ಇದುವರೆಗೂ ಹಳ್ಳಿಗಳಲ್ಲಿ ಬೇಟೆಯಾಡುತ್ತಿದ್ದ ಚಿರತೆಗಳು ಇದೀಗ ರಾಜ ರೋಷವಾಗಿ ನಗರಗಳಿಗೂ ಎಂಟ್ರಿ ಕೊಡಲು ಶುರು ಮಾಡಿದೆ. ಪದ್ಯ ಮಂಗಳೂರಿನ ನಗರದಲ್ಲಿಯೂ ಚಿರತೆ ಕಾಟಗಳು ಶುರುವಾಗಿದ್ದು, ರಾತ್ರಿ ವೇಳೆ ಚಿರತೆಗಳು ನಗರಕ್ಕೆ ಬರುತ್ತಿವೆ. ಈ ಕಾರಣ ನಗರವಾಸಿಗಳು ಆತಂಕದಲ್ಲಿದ್ದಾರೆ.
ಮಂಗಳೂರು ನಗರದ ಕದ್ರಿ ಕೈಬಟ್ಟಲ್, ಶಕ್ತಿನಗರ ಹಾಗೂ ಮರೋಳಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಟ ಹೆಚ್ಚಾಗಿದೆ. ಮೂರು ಚಿರತೆಗಳು ಇವೆ ಎನ್ನಲಾಗಿದ್ದು, ಕೆಲ ಮನೆಗಳ ಸಿಸಿಟಿವಿಯಲ್ಲಿ ಚಿರತೆಗಳ ಓಡಾಟ ಸೆರೆಯಾಗಿದೆ. ಇದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಕದ್ರಿಯ ಡಾಕ್ಟರ್ಸ್ ಕಾಲೊನಿ ಗೇಟ್ ಮುಂಭಾಗದಲ್ಲಿ ಚಿರತೆ ಓಡಾಟ ನಡೆಸಿರುವುದು ಅಲ್ಲಿನ ಎರಡು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಚಿರತೆಯ ಚಲನವಲನ ಸಿ.ಸಿ ಕ್ಯಾಮೆರಾದಲ್ಲಿ ಮಾತ್ರ ಸೆರೆಯಾಗಿದೆ ಹೊರತು ಯಾರಿಗೂ ನೇರವಾಗಿ ಕಾಣಲು ಸಿಕ್ಕಿಲ್ಲ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಚಿರತೆ ಹಿಡಿಯುವಂತೆ ಜನ ಆಗ್ರಹಿಸಿದ್ದಾರೆ. ಸದ್ಯ, ಚಿರತೆಯನ್ನು ಸೆರೆಹಿಡಿಯಲು ಕದ್ರಿ ಮತ್ತು ಮರೋಳಿ ಭಾಗಗಳಲ್ಲಿ ಅರಣ್ಯ ಇಲಾಖೆ ಬೋನು ಇರಿಸಿದೆ. ಅಲ್ಲದೆ ರಾತ್ರಿ ವೇಳೆ ಹೊರಗಡೆ ತಿರುಗಾಡುವಾಗ ಎಚ್ಚರ ವಹಿಸುವಂತೆ ಜನರಿಗೆ ಸೂಚಿಸಲಾಗಿದೆ.



