Home Karnataka News ನಾಡಿನಾದ್ಯಂತ ಕುತೂಹಲ ಮೂಡಿಸಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ…!!

ನಾಡಿನಾದ್ಯಂತ ಕುತೂಹಲ ಮೂಡಿಸಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ…!!

ಬೆಂಗಳೂರು: ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ… ಹೊಸ ವರ್ಷದ ಹರುಷ ತರುವ ಯುಗಾದಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ (ಮಾರ್ಚ್ 19). ಈ ಸಂದರ್ಭದಲ್ಲಿ ನಾಡಿನಾದ್ಯಂತ ಕುತೂಹಲ ಮೂಡಿಸಿರುವುದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ.

ಕಳೆದ 2025ರ ಯುಗಾದಿಯ ಸಂದರ್ಭದಲ್ಲಿ ಶ್ರೀಗಳು ನುಡಿದಿದ್ದ ಭಯಾನಕ ಮುನ್ಸೂಚನೆಗಳು ಹಾಗೂ ಪ್ರಸಕ್ತ ವಿದ್ಯಮಾನಗಳ ನಡುವಿನ ಸಾಮ್ಯತೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

​ಮಹಾಭಾರತದ ಉಲ್ಲೇಖ: ‘ದುರ್ಯೋಧನನ ಗೆಲುವು’ ಎಂದಿದ್ದೇಕೆ?
​ಕಳೆದ ವರ್ಷದ ಭವಿಷ್ಯದಲ್ಲಿ ಶ್ರೀಗಳು ಮಹಾಭಾರತದ ಪ್ರಸಂಗಗಳನ್ನು ಉಲ್ಲೇಖಿಸಿ ಸಮಾಜದ ಸ್ಥಿತಿಗತಿಯನ್ನು ವಿಶ್ಲೇಷಿಸಿದ್ದರು. “ಅಭಿಮನ್ಯುವಿನ ಬಿಲ್ಲನ್ನು ಕರ್ಣನ ಕೈಯಲ್ಲಿ ಮೋಸದಿಂದ ಕಿತ್ತುಕೊಂಡು ದಾರ ಕತ್ತರಿಸಿದಂತೆ, ಮನುಷ್ಯ ಮನುಷ್ಯನ ನಡುವಿನ ನಂಬಿಕೆ ಮತ್ತು ವಿಶ್ವಾಸ ಇಂದು ಮರೀಚಿಕೆಯಾಗುತ್ತಿದೆ,” ಎಂದು ಅವರು ವಿಷಾದಿಸಿದ್ದರು.

“ಮಹಾಭಾರತದ ಗದಾಯುದ್ಧದಲ್ಲಿ ಕೃಷ್ಣನಿದ್ದ ಕಾರಣ ಭೀಮ ಗೆದ್ದಿದ್ದ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮದ ಹಾದಿ ತಪ್ಪುತ್ತಿದ್ದು, ಕೃಷ್ಣನಿಲ್ಲದ ಕಾರಣ ‘ದುರ್ಯೋಧನ’ನ ಅಟ್ಟಹಾಸ ಮೇಲುಗೈ ಸಾಧಿಸಲಿದೆ.” ಇದು ರಾಜಕೀಯ ಅಸ್ಥಿರತೆ ಅಥವಾ ನೈತಿಕ ಪತನದ ಸಂಕೇತವೆಂದೇ ವಿಶ್ಲೇಷಿಸಲಾಗಿತ್ತು.

ಆಕಾಶ ತತ್ವ ಮತ್ತು ವಿಮಾನ ದುರಂತದ ಕರಾಳ ಛಾಯೆ:
ಪಂಚಭೂತಗಳ ಪೈಕಿ ಭೂಮಿ, ಅಗ್ನಿ ಮತ್ತು ವಾಯು ತತ್ವಗಳಿಂದ ಜಗತ್ತಿಗೆ ಗಂಡಾಂತರವಿದೆ ಎಂದು ಶ್ರೀಗಳು ಎಚ್ಚರಿಸಿದ್ದರು. ವಿಶೇಷವಾಗಿ ‘ಆಕಾಶ ತತ್ವ’ದ ಏರುಪೇರಿನಿಂದ ದೊಡ್ಡ ಮಟ್ಟದ ಅವಘಡ ಸಂಭವಿಸಲಿದೆ ಎಂಬ ಅವರ ನುಡಿಗಳು ಅಹಮದಾಬಾದ್-ಲಂಡನ್ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ ಪತನದ ಮೂಲಕ ಸಾಕಾರಗೊಂಡವು ಎಂಬುದು ಭಕ್ತರ ನಂಬಿಕೆ. ಈ ಭೀಕರ ದುರಂತದಲ್ಲಿ 260 ಮಂದಿ ಸಾವನ್ನಪ್ಪಿದ್ದು ಜಗತ್ತನ್ನೇ ನಡುಗಿಸಿತ್ತು.

ಜಾಗತಿಕ ಯುದ್ಧ ಮತ್ತು ಪ್ರಾಕೃತಿಕ ವಿಕೋಪ: ಯುದ್ಧದ ಕಾರ್ಮೋಡ: ಇಸ್ರೇಲ್-ಇರಾನ್ ಸಂಘರ್ಷ ಮತ್ತು ಭಾರತ-ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯು ಶ್ರೀಗಳು ನುಡಿದಿದ್ದ ‘ಯುದ್ಧದಿಂದ ಸೈನಿಕರ ಸಾವು’ ಎಂಬ ಭವಿಷ್ಯಕ್ಕೆ ಕನ್ನಡಿ ಹಿಡಿದಂತಿದೆ.

ಪ್ರಕೃತಿಯ ಮುನಿಸು: ಭೂಮಿ ಬಿರುಕು ಬಿಡುವುದು, ಗುಡ್ಡ ಕುಸಿತ ಹಾಗೂ ಪ್ರವಾಹದ ಬಗ್ಗೆ ಅವರು ನೀಡಿದ್ದ ಎಚ್ಚರಿಕೆಗಳು ಕಳೆದ ವರ್ಷದ ಹವಾಮಾನ ವೈಪರೀತ್ಯಗಳಲ್ಲಿ ಕಂಡುಬಂದಿವೆ. ಜೋಶಿಮಠದಂತಹ ಪವಿತ್ರ ಸ್ಥಳಗಳ ಅಳಿವು-ಉಳಿವಿನ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದರು.

ಪಂಚಾಗ್ನಿ ಜಪ: ತಾವು ಪಂಚಾಗ್ನಿ ಮಧ್ಯೆ ಕುಳಿತು ಜಪ ಮಾಡುವಾಗ ವಿಘ್ನ ಉಂಟಾಗಿತ್ತು ಎಂದು ಹೇಳುವ ಮೂಲಕ, ದೇಶದ ಆಡಳಿತಾರೂಢ ವ್ಯವಸ್ಥೆಗೆ ಅಥವಾ ರಾಜಕೀಯ ಮುಖಂಡರಿಗೆ ‘ರಾಜಭಂಗ’ ಕಾದಿದೆ ಎಂದು ಸೂಚ್ಯವಾಗಿ ತಿಳಿಸಿದ್ದರು.
ರಾಜಕೀಯ ಸಂಚಲನ: ಸಿಎಂ ಬದಲಾವಣೆ ಸೂಚನೆ?
ಕಳೆದ ಬಾರಿಯ ಭವಿಷ್ಯದಲ್ಲಿ ಕರ್ನಾಟಕದ ರಾಜಕೀಯದ ಬಗ್ಗೆಯೂ ಶ್ರೀಗಳು ಮಾತನಾಡಿದ್ದರು. ಸಿದ್ದರಾಮಯ್ಯನವರು ತಾವಾಗಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಬರಬಹುದು ಎಂಬ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಡಳಿತಾತ್ಮಕವಾಗಿ ದೊಡ್ಡ ತೊಂದರೆಯಾಗದಿದ್ದರೂ, ವೈಯಕ್ತಿಕವಾಗಿ ನಾಯಕರಿಗೆ ಕಂಟಕವಿದೆ ಎಂದು ಅವರು ವಿಶ್ಲೇಷಿಸಿದ್ದರು.