Home Karnataka News ಭಾರೀ ಮಳೆ ನಡುವೆ ಜಲಪಾತದಲ್ಲಿ ಅವಾಂತರ : ಸೆಲ್ಫಿಗಾಗಿ ನೀರಿಗಿಳಿದ ಕಾಲೇಜು ವಿದ್ಯಾರ್ಥಿಗಳ ರಕ್ಷಣೆ…!!

ಭಾರೀ ಮಳೆ ನಡುವೆ ಜಲಪಾತದಲ್ಲಿ ಅವಾಂತರ : ಸೆಲ್ಫಿಗಾಗಿ ನೀರಿಗಿಳಿದ ಕಾಲೇಜು ವಿದ್ಯಾರ್ಥಿಗಳ ರಕ್ಷಣೆ…!!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಪಾತಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನಡುವೆಯೇ, ಪ್ರವಾಸಿಗರ ನಿರ್ಲಕ್ಷ್ಯ ಮತ್ತೊಮ್ಮೆ ಜೀವಕ್ಕೆ ಕುತ್ತು ತರುವ ಘಟನೆ ಬೆಳಕಿಗೆ ಬಂದಿದೆ.

ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಹಾಗೂ ಫೋಟೋ ತೆಗೆಯಲು ನಿಷೇಧಿತ ಪ್ರದೇಶಕ್ಕೆ ಇಳಿದಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಏಕಾಏಕಿ ನೀರಿನ ಮಟ್ಟ ಏರಿಕೆಯಿಂದ ನಡುನೀರಿನ ಬಂಡೆಯ ಮೇಲೆ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಸಂತೋಷ್ ಕುಮಾರ್ ಹಾಗೂ ಗಣೇಶ್ ನಾಯಕ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಕೊಡಗು ಪ್ರವಾಸಕ್ಕೆ ಬಂದಿದ್ದರು. ಮಲ್ಲಳ್ಳಿ ಜಲಪಾತದ ಮಧ್ಯಭಾಗದಲ್ಲಿದ್ದ ಬಂಡೆಯ ಮೇಲೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆಯುತ್ತಿದ್ದ ವೇಳೆ, ಜಲಪಾತದ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಯಿತು. ಇದರಿಂದ ಕ್ಷಣಾರ್ಧದಲ್ಲೇ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದ್ದು, ಇಬ್ಬರೂ ದಡ ಸೇರಲು ಸಾಧ್ಯವಾಗದೆ ನಡುನೀರಿನಲ್ಲೇ ಸಿಲುಕಿಕೊಂಡರು.

ಯುವಕರು ಸಹಾಯಕ್ಕಾಗಿ ಕೂಗಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಹಾಗೂ ಪ್ರವಾಸಿಗರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಉಕ್ಕಿ ಹರಿಯುತ್ತಿದ್ದ ನೀರಿನ ನಡುವೆಯೇ ಹಗ್ಗ ಹಾಗೂ ಲೈಫ್ ಜಾಕೆಟ್‌ಗಳ ನೆರವಿನಿಂದ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

ಅದೃಷ್ಟವಶಾತ್ ಸಕಾಲದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಗಾಲದಲ್ಲಿ ಜಲಪಾತಗಳು ಹಾಗೂ ನದಿಗಳಲ್ಲಿ ನೀರಿನ ಹರಿವು ಯಾವುದೇ ಮುನ್ಸೂಚನೆಯಿಲ್ಲದೆ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಪ್ರವಾಸಿಗರು ನಿಷೇಧಿತ ಪ್ರದೇಶಗಳಿಗೆ ಇಳಿಯದೇ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.