ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ತೈಲ ಕಂಪನಿಗಳ ಮೇಲಿನ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ ಇಂಧನದ ಮೇಲೆ ಸರಾಸರಿ 3 ರೂಪಾಯಿ ಹೆಚ್ಚಳವಾಗಿದ್ದು, ಶುಕ್ರವಾರ (ಮೇ 15) ಇಂದಿನ ಮುಂಜಾನೆಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹3.27 ಏರಿಕೆಯಾಗುವುದರೊಂದಿಗೆ ₹106.17 ತಲುಪಿದೆ. ಇನ್ನು ಡೀಸೆಲ್ ಬೆಲೆ ₹3.12 ರಷ್ಟು ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ ₹94.10ಕ್ಕೆ ಮಾರಾಟವಾಗುತ್ತಿದೆ. ಈ ಬೆಲೆ ಏರಿಕೆಯು ಸಾರಿಗೆ ವೆಚ್ಚದ ಮೇಲೆ ನೇರ ಪರಿಣಾಮ ಬೀರಲಿದ್ದು, ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗುವ ಭೀತಿ ಜನಸಾಮಾನ್ಯರನ್ನು ಕಾಡುತ್ತಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ಸ್ಥಿತಿಗತಿ (ಪ್ರತಿ ಲೀಟರ್‌ಗೆ):
ನಗರ ಪೆಟ್ರೋಲ್ (₹) ಡೀಸೆಲ್ (₹)
ಬೆಂಗಳೂರು 106.17 94.10
ನವದೆಹಲಿ 94.77 90.67
ಮುಂಬೈ 106.68 93.14
ಕೋಲ್ಕತ್ತಾ 108.74 95.13
ಚೆನ್ನೈ 103.67 95.25
ಮಧ್ಯಪ್ರಾಚ್ಯದ ಯುದ್ಧ ಸನ್ನಿವೇಶ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳಿಂದಾಗಿ ತೈಲ ಕಂಪನಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದವು. ಒಂದು ಅಂದಾಜಿನ ಪ್ರಕಾರ, ಬೆಲೆ ಪರಿಷ್ಕರಣೆ ಮಾಡದಿದ್ದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಒಂದೇ ತ್ರೈಮಾಸಿಕದಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವ ಭೀತಿಯಲ್ಲಿದ್ದವು.
ಕೇಂದ್ರ ಸರ್ಕಾರವು ಮಾರ್ಚ್ 27 ರಂದು ಅಬಕಾರಿ ಸುಂಕವನ್ನು (Excise Duty) ಗಣನೀಯವಾಗಿ ಕಡಿತಗೊಳಿಸಿ ಬೆಲೆ ನಿಯಂತ್ರಿಸಲು ಪ್ರಯತ್ನಿಸಿತ್ತಾದರೂ, ಅಂತರಾಷ್ಟ್ರೀಯ ಮಾರುಕಟ್ಟೆಯ ಒತ್ತಡದಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿಯವರ ಮುನ್ಸೂಚನೆ
ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಮಿತವ್ಯಯದ ಬಗ್ಗೆ ಜನರಲ್ಲಿ ಮನವಿ ಮಾಡಿದ್ದರು. ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಇಂಧನ ಬಳಕೆ ಕಡಿಮೆ ಮಾಡುವುದು ಮತ್ತು ಹೂಡಿಕೆಯ ಮೇಲೆ ಗಮನ ಹರಿಸುವಂತೆ ಅವರು ನೀಡಿದ್ದ ಸೂಚನೆಯು, ಈ ಬೆಲೆ ಏರಿಕೆಯ ಮುನ್ಸೂಚನೆಯಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ.




