ಉಡುಪಿ : ಸೈಬರ್ ಅಪರಾಧ, ಮಾದಕ- ಡ್ರಗ್ಸ್ ಸೇವನೆ, ಬಾಲಾಪರಾಧ ತಡೆ ಇತ್ಯಾದಿಗಳ ಮಾಹಿತಿ ನೀಡುವ ‘ಮನೆ ಮನೆಗೆ ಪೊಲೀಸ್’ ಎಂಬ ವಿಶಿಷ್ಟ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಚಾಲನೆ ನೀಡಿದರು.
ಸಮಾಜ ಸ್ವಾಸ್ಥ್ಯ ಆಶಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಕಾರ್ಯ ಯಶಸ್ವಿಯಾಗಲಿ, ಪೊಲೀಸ್ ಸೇವೆ ಪ್ರತೀ ಮನೆ ಮನೆಗೆ ತಲುಪಲಿ ಎಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಅಭಿಯಾನದಲ್ಲಿ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಡಲಾಗುವುದು. ಇಂದು ಉಡುಪಿ ಉಪ ವಿಭಾಗದ ಉಡುಪಿ ನಗರ ಠಾಣೆ, ಮಣಿಪಾಲ, ಬ್ರಹ್ಮಾವರ ಮತ್ತು ಕೋಟ ಠಾಣೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಭಿಯಾನ ಸಂದರ್ಭದಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್, ಬಾಲಾಪರಾಧ, ಪೋಕ್ಸೊ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.
ಇದೇ ಸಂದರ್ಭದಲ್ಲಿ ಮನೆಯವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಪಡೆಯಲಾಗುವುದು.
ತಂಡದಲ್ಲಿ ಪಿಐ/ಪಿಎಸ್ಐ, ಎಎಸ್ಐ, ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಇದ್ದಾರೆ ಎಂದರು.
ಪೊಲೀಸ್ ಅಧಿಕಾರಿಗಳಾದ ಸುಧಾಕರ ಎಸ್ ನಾಯ್ಕ, ಪರಮೇಶ್ವರ ಹೆಗಡೆ, ಪ್ರಭು ಡಿ.ಟಿ, ಭರತೇಶ್, ನಾರಾಯಣ, ಪ್ರಕಾಶ್ ಸಾಲಿಯಾನ್, ಹುಸೇನ್ ಸಾಬ್ ಮೊದಲಾದವರಿದ್ದರು.
ಉಡುಪಿ ನಗರ ಠಾಣೆಯ 28, ಮಣಿಪಾಲ 45, ಬ್ರಹ್ಮಾವರ 30 ಮತ್ತು ಕೋಟ 25 ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ ತಿಳಿಸಲಾಯಿತು. ಈ ಕಾರ್ಯಕ್ರಮ ಮುಂದಿನ 3 ತಿಂಗಳವರೆಗೆ ಇರಲಿದೆ.


