ಬೆಂಗಳೂರು : ಲಾರಿಯೊಂದು ಬಾಲಕನಿಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಕಲಬುರಗಿ ಮೂಲದ ವಿಜಯ್ ಅವರ ತಂದೆ–ತಾಯಿ ಹೋಬಳಿಯ ಬಿಲ್ಲಕೆಂಪನಹಳ್ಳಿಯಲ್ಲಿ ನೆಲೆಸಿದ್ದು, ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ವಿಜಯ್ ನಿತ್ಯ ಅಲ್ಲಿಂದ ಶಾಲೆಗೆ ಬಸ್‌ನಲ್ಲಿ ಬರುತ್ತಿದ್ದ. ಬೆಳಿಗ್ಗೆ 8.45ರ ಸುಮಾರಿಗೆ ಬಿಲ್ಲಕೆಂಪನಹಳ್ಳಿಯಿಂದ ಬೈಕ್ ಸವಾರರೊಬ್ಬರಿಂದ ಬಾನಂದೂರು ಕ್ರಾಸ್‌ವರೆಗೆ ಡ್ರಾಪ್ ತೆಗೆದುಕೊಂಡಿದ್ದ ಬಿಡದಿ ಠಾಣೆ ಪೊಲೀಸರು ತಿಳಿಸಿದರು.
ಅಲ್ಲಿಂದ ಸ್ವಲ್ಪ ದೂರವೇ ಇದ್ದ ಶಾಲೆಗೆ ಬಾಲಕ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ. ಇದೇ ವೇಳೆ, ಅಜಾಗರೂಕತೆಯಿಂದ ವೇಗವಾಗಿ ಬಂದ ಲಾರಿ ಚಾಲಕ ವಿಜಯ್‌ಗೆ ಡಿಕ್ಕಿ ಹೊಡೆದಿದ್ದಾನೆ. ಲಾರಿ ಚಕ್ರಗಳು ಮೈ ಮೇಲೆ ಹರಿದಿದ್ದರಿಂದ ವಿಜಯ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದರು.
ಚಾಲಕನ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿಯಾಗಿದ್ದನ್ನು ಕಂಡು ರೊಚ್ಚಿಗೆದ್ದ ಸ್ಥಳೀಯರು, ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋಗಿ ಚಾಲಕನನ್ನು ವಶಕ್ಕೆ ಪಡೆಯಲಾಯಿತು. ವಿದ್ಯಾರ್ಥಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು.
ಘಟನೆ ಕುರಿತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.





