Home Crime ಸಹಪಾಠಿಯ ಅಟ್ಟಹಾಸಕ್ಕೆ ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಬಲಿ…!!

ಸಹಪಾಠಿಯ ಅಟ್ಟಹಾಸಕ್ಕೆ ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಬಲಿ…!!

ಬಳ್ಳಾರಿ: ಜಿಲ್ಲೆಯ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಸಹಪಾಠಿಯ ಅಟ್ಟಹಾಸಕ್ಕೆ ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಕಬ್ಬಿಣದ ರಾಡ್‌ನಿಂದ ನಡೆಸಿದ ಈ ಭೀಕರ ಹಲ್ಲೆಯಲ್ಲಿ ಇತರ ಏಳು ಮಕ್ಕಳು ಹಾಗೂ ಹಾಸ್ಟೆಲ್ ವಾರ್ಡನ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ‌ಮಾಹಿತಿ ತಿಳಿದು ಬಂದಿದೆ.

​ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ವಿದ್ಯಾರ್ಥಿಯು ಇದ್ದಕ್ಕಿದ್ದಂತೆ ಕಬ್ಬಿಣದ ರಾಡ್‌ನಿಂದ ಸಹ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಡೆಯಲು ಬಂದ ವಾರ್ಡನ್ ಮೇಲೆಯೂ ಹಲ್ಲೆ ನಡೆಸಿರುವ ವಿದ್ಯಾರ್ಥಿ, ಸದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಿಂದ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ಮಗನ ಸಾವಿಗೆ ಶಾಲಾ ಮಂಡಳಿಯೇ ನೇರ ಹೊಣೆ. ಒಬ್ಬ ವಿದ್ಯಾರ್ಥಿ ಇಷ್ಟು ಭೀಕರವಾಗಿ ಹಲವರ ಮೇಲೆ ದಾಳಿ ಮಾಡಲು ಹೇಗೆ ಸಾಧ್ಯ? ಆರೋಪಿ ಬಾಲಕ ಡ್ರಗ್ ಅಡಿಕ್ಟ್ (ಮಾದಕ ವ್ಯಸನಿ) ಆಗಿರುವ ಸಾಧ್ಯತೆಯಿದೆ. ಮಂಡಳಿಯ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ,” ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

ಶಾಲಾ ಮಂಡಳಿಯು ಇದು ರಾಡ್‌ನಿಂದ ನಡೆದ ಹಲ್ಲೆ ಎಂದು ಹೇಳುತ್ತಿದ್ದರೂ, ಗಾಯದ ಸ್ವರೂಪ ನೋಡಿ ಚಾಕುವಿನಿಂದ ಇರಿದಿರುವ ಸಂಶಯವನ್ನೂ ಪೋಷಕರು ವ್ಯಕ್ತಪಡಿಸಿದ್ದಾರೆ. ಒಬ್ಬನೇ ಬಾಲಕ ಇಷ್ಟು ಮಂದಿಯ ಮೇಲೆ ಹಲ್ಲೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಳ್ಳಾರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಾರಿಯಾಗಿರುವ ಆರೋಪಿ ಬಾಲಕನಿಗಾಗಿ ಹುಡುಕಾಟ ಮುಂದುವರಿದಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.