Home Crime ಕೊಕ್ಕರ್ಣೆ ಬಳಿ ಟ್ರಾಕ್ಟರ್ ಟಿಲ್ಲರ್ ಪಲ್ಟಿ : ಚಾಲಕ ಮೃತ್ಯು..!!

ಕೊಕ್ಕರ್ಣೆ ಬಳಿ ಟ್ರಾಕ್ಟರ್ ಟಿಲ್ಲರ್ ಪಲ್ಟಿ : ಚಾಲಕ ಮೃತ್ಯು..!!

ಬ್ರಹ್ಮಾವರ: ಕೊಕ್ಕರ್ಣೆ ಮೊಗವೀರ ಪೇಟೆ ಸಮೀಪ ಟ್ರಾಕ್ಟರ್ ಟಿಲ್ಲರ್ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಮೃತ ಚಾಲಕನನ್ನು ಪಕೀರಪ್ಪ ಎಂದು ಗುರುತಿಸಲಾಗಿದೆ. ದಾರವಾಡ ಜಿಲ್ಲೆಯ ನಲ್ಲಗುಂದ ನಿವಾಸಿ ಅಡಿಯಪ್ಪ ಮಾದರ ಅವರು ನೀಡಿದ ದೂರಿನ ಪ್ರಕಾರ, ಅವರು ಹಾಗೂ ಚಾಲಕ ಪಕೀರಪ್ಪ ಹುಲ್ಲು ಸಾಗಿಸಲು KA-29-TC-5284 ಸಂಖ್ಯೆಯ ಟ್ರಾಕ್ಟರ್ ಟಿಲ್ಲರ್ ವಾಹನದಲ್ಲಿ ಕೊಕ್ಕರ್ಣೆಗೆ ತೆರಳುತ್ತಿದ್ದರು.

ಸಂಜೆ ಸುಮಾರು 4:30ರ ವೇಳೆಗೆ ಕೊಕ್ಕರ್ಣೆ ಮೊಗವೀರ ಪೇಟೆ ಬಳಿ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಗೆ ಮಗುಚಿದೆ. ಈ ವೇಳೆ ಚಾಲಕ ಪಕೀರಪ್ಪ ವಾಹನದಿಂದ ಹೊರಕ್ಕೆ ಎಸೆಯಲ್ಪಟ್ಟು ತಲೆ ರಸ್ತೆಗಪ್ಪಳಿಸಿದ್ದು, ಬಳಿಕ ವಾಹನದ ಚಕ್ರ ಎದೆಯ ಮೇಲಿಂದ ಹರಿದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಅಡಿಯಪ್ಪ ಮಾದರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳು ಚಾಲಕನನ್ನು ತಕ್ಷಣ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪಕೀರಪ್ಪ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.