ಕಡಬ, ಮಾ. 7: ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಸಂಕಡ್ಕ ಪ್ರದೇಶದಲ್ಲಿರುವ ತೋಟದಲ್ಲಿ ಹುಂಜ ಕೋಳಿಗಳನ್ನು ಕಟ್ಟಿ ಹಣ ಪಣವಾಗಿ ಜೂಜಾಟ ಆಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಜಿ.ವಿ ಅವರಿಗೆ ಮಾರ್ಚ್ 6 ರಂದು ಸಂಜೆ ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಜಯರಾಮ ಎಂಬವರ ತೋಟದ ಮೇಲೆ ದಾಳಿ ನಡೆಸಿದರು.
ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಜೂಜಾಟದಲ್ಲಿ ತೊಡಗಿದ್ದವರು ಪರಾರಿಯಾಗಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಕೋಳಿಗಳನ್ನು ಕಟ್ಟಿ ಜೂಜಾಟ ಆಡಿರುವ ಕುರುಹುಗಳು ಕಂಡುಬಂದಿದ್ದು, ಎರಡು ಕೋಳಿಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಕೋಳಿಯ ಕಾಲಿಗೆ ಕೋಳಿ ಅಂಕಕ್ಕೆ ಬಳಸುವ ಕತ್ತಿ ಕಟ್ಟಿರುವುದು ಗಮನಕ್ಕೆ ಬಂದಿದೆ.
ಪ್ರಾಥಮಿಕ ಮಾಹಿತಿಯಂತೆ ಯೇನೆಕಲ್ಲು ಗ್ರಾಮದ ನಿವಾಸಿ ಪುರಂದರ ಮತ್ತು ಇತರರು ಈ ಹುಂಜ ಕೋಳಿ ಜೂಜಾಟದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




