ಬೆಳ್ತಂಗಡಿ: ತೀವ್ರ ರಾಜಕೀಯ ಜಿದ್ದಾಜಿದ್ದಿ ಮತ್ತು ಚರ್ಚೆಗಳ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಗುರುವಾರ ಸಂಜೆಯೇ ಧರ್ಮಸ್ಥಳಕ್ಕೆ ಆಗಮಿಸಿದ್ದ ಅವರು, ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದರು. ತದನಂತರ ಶುಕ್ರವಾರ(ಜೂ.26) ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರುಗಳ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕರಾವಳಿ ಭಾಗದ ಪ್ರಮುಖ ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷರಿಗೆ ಸಾಥ್ ನೀಡಿದರು.
ಇತ್ತೀಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (ಕ್ರಾಸ್ ವೋಟಿಂಗ್) ಹಿನ್ನೆಲೆಯಲ್ಲಿ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಎಲ್ಲಾ ಬಿಜೆಪಿ ಶಾಸಕರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಬೇಕೆಂದು ಬಿ.ವೈ.ವಿಜಯೇಂದ್ರ ಅವರು ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ, ರಾಜಕೀಯದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಎಳೆದು ತರುತ್ತಿರುವುದಕ್ಕೆ ಪಕ್ಷದ ಒಳಗಿನಿಂದ ಹಾಗೂ ಹೊರಗಿನಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಣೆ-ಪ್ರಮಾಣ ಮಾಡುವ ನಿರ್ಧಾರವನ್ನು ಅಧಿಕೃತವಾಗಿ ಕೈಬಿಡಲಾಗಿತ್ತು.

ಹೀಗೆ ಒಟ್ಟಾಗಿ ಬಂದು ಆಣೆ-ಪ್ರಮಾಣ ಮಾಡುವ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರಾವಳಿಯ ಶಾಸಕರೊಂದಿಗೆ ಒಬ್ಬರೇ ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಡ್ಡ ಮತದಾನದ ವಿಷಯದಲ್ಲಿ ದೇವರ ಸನ್ನಿಧಿಗೆ ಬರುವುದಾಗಿ ಹೇಳಿ ನಂತರ ನಿರ್ಧಾರ ಬದಲಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅಥವಾ ಹರಕೆಯ ರೂಪದಲ್ಲಿ ಅವರು ಮಂಜುನಾಥ ಸ್ವಾಮಿಗೆ ‘ತಪ್ಪು ಕಾಣಿಕೆ’ ಒಪ್ಪಿಸಲು ಬಂದಿದ್ದಾರೆಯೇ ಎಂಬ ಶಂಕೆ ಮತ್ತು ವ್ಯಾಪಕ ಚರ್ಚೆಗಳು ಸದ್ಯ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.




