ಹೆಬ್ರಿ : ಹಲ್ಲೆ ಪ್ರಕರಣ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾದ ಘಟನೆ ನಡೆದಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಬ್ರಹ್ಮಾವರ ಕೆಂಜೂರು ಗ್ರಾಮದ ಸಂತೋಷ್ ಎಂಬವರು ಜು. 20ರಂದು ಸದಾನಂದ ಎಂಬವರ ಜೊತೆ ಸಂತೆಕಟ್ಟೆಯಲ್ಲಿನ ಸಿರಿಮುಡಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದಾಗ ಅದೇ ಹೊಟೇಲ್‌ಗೆ ಬಂದಿದ್ದ ಶ್ರೀಕಾಂತ ಹಾಗೂ ರಾಜೇಶ್ ಯಾವುದೋ ಒಂದು ವಿಚಾರವಾಗಿ ಗಲಾಟೆ ಮಾಡುತ್ತಿದ್ದರು. ಅವರಿಬ್ಬರಲ್ಲಿ ಗಲಾಟೆ ಮಾಡಿಕೊಳ್ಳಬೇಡಿ ಎಂದು ಹಿತನುಡಿ ಹೇಳಿದಾಗ ರಾಜೇಶ್ ಅವಾಚ್ಯ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಅಲ್ಲದೇ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಸಂತೋಷ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರತಿ ದೂರು ಬ್ರಹ್ಮಾವರ ಸಂತೆಕಟ್ಟೆಯ ರಾಜ ಎಂಬವರು ಹೆಬ್ರಿ ಠಾಣೆಗೆ ಪ್ರತಿ ದೂರು ನೀಡಿದ್ದು, ಜು. 20ರಂದು ತಾನು ಸದಾನಂದ ಎಂಬವರಿಗೆ ಕರೆ ಮಾಡಿ ನಿಮ್ಮ ಗೆಳೆಯ ಶ್ರೀಕಾಂತ ನನಗೆ ಬೈಯುತ್ತಿರುತ್ತಾನೆ. ಆತನಿಗೆ ಬುದ್ದಿ ಹೇಳಿ ಎಂದು ತಿಳಿಸಿರುತ್ತೇನೆ. ಅದೇ ದಿನ ಮಧ್ಯಾಹ್ನ ಸದಾನಂದ ನನಗೆ ಕರೆ ಮಾಡಿ ಸಿರಿಮುಡಿ ಹೋಟೆಲ್‌ಗೆ ಬರುವಂತೆ ತಿಳಿಸಿದ್ದು, ಅಲ್ಲಿಗೆ ಹೋದಾಗ ಸದಾನಂದ, ಶ್ರೀಕಾಂತ, ಸಂತೋಷ ಮೂವರು ಮದ್ಯಪಾನ ಮಾಡಿ ಬಂದು ಶ್ರೀಕಾಂತ ಬೈದಿರುವ ಬಗ್ಗೆ ನಿನ್ನ ಬಳಿ ಸಾಕ್ಷಿ ಇದೆಯೇ ? ಎಂದು ಕೇಳಿರುತ್ತಾರೆ. ನನಗೆ ಶ್ರೀಕಾಂತ ತೊಂದರೆ ನೀಡದಂತೆ ತೀರ್ಮಾನ ಮಾಡಿಕೊಡಿ ಎಂದು ಹೇಳಿದಾಗ ಶ್ರೀಕಾಂತನು ನನ್ನ ಅಂಗಿಯ ಕಾಲರ್ ಪಟ್ಟಿ ಹಿಡಿದು ಹಲ್ಲೆಗೈದಿರುತ್ತಾನೆ. ಅಲ್ಲಿಂದ ನಾನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಸದಾನಂದ ತಡೆದು ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ತಲೆಗೆ ಬೀಸಿ ಮಾರಾಣಾಂತಿಕ ಹಲ್ಲೆಗೆ ಮುಂದಾಗಿದ್ದಾನೆ. ಅನಂತರ ಸದಾನಂದ , ಶ್ರೀಕಾಂತ , ಸಂತೋಷ ಮೂವರು ಸೇರಿ ನನ್ನನ್ನು ಹೋಟೆಲ್‌ನಿಂದ ಹೊರಗಡೆ ಎಳೆದು ಎದೆ, ಕುತ್ತಿಗೆ, ತಲೆಗೆ ಭಾಗಕ್ಕೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಪೊಲೀಸರಿಗೆ ದೂರು ನೀಡಿದರೆ ತಲವಾರಿನಿಂದ ಕಡಿದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ರಾಜ ದೂರಿನಲ್ಲಿ ತಿಳಿಸಿದ್ದಾರೆ.