ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಚಿನ್ನದೊಡವೆಗಳನ್ನು ತೊಳೆದು ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಪಣಿಲಾಜೆ ಎಂಬಲ್ಲಿ ಫೆ.10ರಂದು ಅಪರಿಚಿತನೊಬ್ಬ ಚಿನ್ನದ ಒಡವೆಗಳನ್ನು ತೊಳೆದು ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿದ್ದಾನೆ.
ಬಳಿಕ ಚಿನ್ನವನ್ನು ದ್ರಾವಣ ಬಳಸಿ ಕರಗಿಸಿ ವಂಚಿಸಿದ್ದ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ವೇಣೂರು ಠಾಣಾ ಪೊಲೀಸರು, ಆರೋಪಿ ಚಂದನ್ ಕುಮಾರ್‌ನನ್ನು ದಸ್ತಗಿರಿ ಮಾಡಿ 75,000ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


