Home Crime ತಲೆಮರೆಸಿಕೊಂಡಿದ್ದ ಫೋಕ್ಸೋ ಪ್ರಕರಣದ ಆರೋಪಿಯ ಬಂಧನ…!!

ತಲೆಮರೆಸಿಕೊಂಡಿದ್ದ ಫೋಕ್ಸೋ ಪ್ರಕರಣದ ಆರೋಪಿಯ ಬಂಧನ…!!

ಪುತ್ತೂರು : ಪೋಕ್ಸೋ ಪ್ರಕರಣವೊಂದರಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ನರಿಮೊಗರು ನಿವಾಸಿ ನಮನ್ ನಾಯಕ್ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

2018ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಮನ್ ನಾಯಕ್ ವಿರುದ್ಧ ಪ್ರಕರಣ ಸಂಖ್ಯೆ 53/2018 ದಾಖಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 448 (ಅತಿಕ್ರಮ ಪ್ರವೇಶ), 506 (ಪ್ರಾಣ ಬೆದರಿಕೆ), 354 (ಮಹಿಳೆಯ ಮೇಲಿನ ದೌರ್ಜನ್ಯ) ಹಾಗೂ ಪೋಕ್ಸೋ ಕಾಯ್ದೆಯ ಕಲಂ 12ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದನು. ನ್ಯಾಯಾಲಯವು ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು.

ಆರೋಪಿಯ ಪತ್ತೆಗಾಗಿ ಪುತ್ತೂರು ನಗರ ಪೊಲೀಸ್ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಬೆಂಗಳೂರಿನ ಕೂಡ್ಲುಪೇಟೆ ಪ್ರದೇಶದಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.