Home Crime ಕಾರ್ಕಳ: ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಅಜೆಕಾರಿನ ಮಹಿಳೆ ಗಂಭೀರ…!!

ಕಾರ್ಕಳ: ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಅಜೆಕಾರಿನ ಮಹಿಳೆ ಗಂಭೀರ…!!

ಕಾರ್ಕಳ : ಬೈಕಿನಲ್ಲಿ ಸಹಸವಾರಳಾಗಿ ಹೋಗುತ್ತಿದ್ದ ಅಜೆಕಾರಿನ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಮದಗ ಬಳಿಯ ನಿವಾಸಿ ಪೂರ್ಣಿಮಾ ಪೂಜಾರಿ (40) ಎಂಬವರು ಬೈಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ.

ಪೂರ್ಣಿಮಾ ಅವರು ಕಾರ್ಕಳ ಆನೆಕೆರೆಯ ಖಾಸಗಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಕೆಲಸಕ್ಕೆ ತನ್ನ ಪರಿಚಯದ ರಾಜು ಶೆಟ್ಟಿ ಎಂಬವರ ಬೈಕಿನಲ್ಲಿ ಹೋಗುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಕಾರ್ಕಳ ಬೈಪಾಸ್ ಬಳಿ ಏಕಾಎಕಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದರು.

ಈ ಅಪಘಾತದ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿಲ್ಲ ಹಾಗೂ ಗಾಯಗೊಂಡ ಪೂರ್ಣಿಮಾ ಅವರನ್ನು ಯಾರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಅವರ ಗಂಡನಿಗೆ ದೊರೆತಿಲ್ಲ. ಪೂರ್ಣಿಮಾ ಅವರ ನೆರೆಮನೆಯ ಮಹಿಳೆಯೊಬ್ಬರಿಗೆ ರಾಜು ಶೆಟ್ಟಿ ಎಂಬವರು ಕರೆ ಮಾಡಿ ಪೂರ್ಣಿಮಾ ಅವರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದರು ಎಂದು ಪೂರ್ಣಿಮಾ ಅವರ ಪತಿ ಗುಣಪಾಲ ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ರಾಜು ಶೆಟ್ಟಿಯವರ ಬೈಕಿನಲ್ಲಿ ಹೋಗುತ್ತಿದ್ದಾಗ ಪೂರ್ಣಿಮಾ ಅವರು ಬಿದ್ದು ಗಾಯಗೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿದ್ದ ರಭಸಕ್ಕೆ ಪೂರ್ಣಿಮಾ ಅವರ ತಲೆ,ಮುಖ ಹಾಗೂ ಬೆನ್ನಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಉಡುಪಿಯ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂರ್ಣಿಮಾ ಅವರ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಕಳ ನಗರ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.