ಉಡುಪಿ : ವಾಹನದಟ್ಟಣೆ ಇರುವ ಕಲ್ಸಂಕ ವೃತ್ತದ ಬಳಿ, ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡ ವ್ಯಕ್ತಿಯನ್ನು ನಗರ ಪೋಲಿಸ್ ಠಾಣೆಯ ಪೋಲಿಸರು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ರವಿವಾರ ಸಂಜೆ ನಡೆದಿದೆ.
ವಿಕೃತ ಕೃತ್ಯದಿಂದ ಭಯದ ವಾತಾವರಣ ಸೃಷ್ಟಿಸಿದ ಆಗುಂತಕ ಪಾನಮತ್ತನಾಗಿದ್ದನೋ ಅಥವಾ ಮನೋರೋಗಿಯೋ ಏನೆಂದು ಸ್ವಷ್ಟವಾಗಿಲ್ಲ. ವಾಹನ ನಿಯಂತ್ರಣ ಕರ್ತವ್ಯದಲ್ಲಿದ್ದ ಸಂಚಾರ ಪೋಲಿಸ್ ಸಿಬ್ಬಂದಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಕೃತ್ಯವು ಆಗುಂತಕನಿಂದ ನಡೆಯಿತು.
ಬಾಟಲಿಯಲ್ಲಿ ಪೆಟ್ರೊಲ್ ತುಂಬಿಸಿ ಕೊಂಡುಬಂದಿದ್ದ ವ್ಯಕ್ತಿಯು, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳುವೆನೆಂದು ಬೊಬ್ಬಿಡುತ್ತಿದ್ದ, ಹಲವು ಬಾರಿ ಪೋಲಿಸರು ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡಿದ್ದರು. ಮತ್ತೊಮ್ಮೆ ಬಾಟಲಿಯಲ್ಲಿ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂಡಿದ್ದಾನೆ.
ಪೋಲಿಸರು ಸಮಯಪ್ರಜ್ಞೆಯಿಂದ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ. ವ್ಯಕ್ತಿಯನ್ನು ವಶಕ್ಕೆ ಪಡೆದ ಪೋಲಿಸರು ಮನವೊಲಿಸಿ ಊರಾದ ಗದಗಕ್ಕೆ ರವಾನಿಸುವ ವ್ಯವಸ್ಥೆಗೊಳಿಸಿದರು.
ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಎಸ್ ಐ ಗಂಗಪ್ಪ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.



