ಮಂಗಳೂರು: ರೌಡಿ ಶೀಟರ್ ಆಗಿದ್ದ ತಲಪಾಡಿ ಅಜ್ಜಿನಡ್ಕದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಹುಸೈನ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂಬಾತನನ್ನು ರಾಷ್ಟ್ರೀಯ ಹೆದ್ದಾರಿ 66 ತೊಕ್ಕೊಟ್ಟಿನ ಫ್ಲೈಓವರ್ ನಲ್ಲಿ ಶುಕ್ರವಾರ ಮುಂಜಾನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ.
ಈ ಕೊಲೆ ಪ್ರಕರಣದಲ್ಲಿ 6 ಮಂದಿ ಆರೋಪಿಗಳು ಭಾಗಿಯಾಗಿರುವುದನ್ನು ಗುರುತಿಸಲಾಗಿದೆ. ಆದರೆ ಆರೋಪಿಗಳು ನಿರಂತರವಾಗಿ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಅವರನ್ನು ತಕ್ಷಣ ಬಂಧಿಸುವುದು ತನಿಖಾ ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿ ಎಸಿಪಿ ತಂಡಕ್ಕೆ ವಹಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈವರೆಗೆ ನಡೆದ ತನಿಖೆಯಲ್ಲಿ ಈ ಕೊಲೆ ಕೃತ್ಯದಲ್ಲಿ ಇನ್ನಷ್ಟು ಆರೋಪಿಗಳು ಭಾಗಿ ಆಗಿರುವುದನ್ನು ಗುರುತಿಸಲಾಗಿದೆ. ಆರೋಪಿಗಳಿಗೆ ಕೃತ್ಯ ಎಸಗಲು ಹಾಗೂ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಶಂಕಿತ ಕೆಲವು ವ್ಯಕ್ತಿಗಳನ್ನುವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೃತ್ಯದಲ್ಲಿ ಅವರ ಪಾತ್ರ ದೃಢಪಟ್ಟರೆ, ಅವರನ್ನು ಸಹ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವ ಯಾರಾದರೂ ಬಿಎನ್ಎಸ್ (ಅಪರಾಧಿಗೆ ಆಶ್ರಯ ನೀಡುವ) ಸೆಕ್ಷನ್ 249(ಎ) ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.





