ವಿಟ್ಲ: ರಕ್ತ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ ರಕ್ತದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದು ದೂರು ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಗೆ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನಧಿಕೃತ ಲ್ಯಾಬೊರೇಟರಿಗೆ ಬೀಗ ಜಡಿದಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬದನಾಜೆ ನಿವಾಸಿ ಕಿಯಾನ್ಕ್ ಹರ್ಬಲ್ ಕಂಪನಿಯ ಮಾಲೀಕ ಡಾ.ಶರತ್ ಶೆಟ್ಟಿ ದೂರುದಾರರು.
ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆಯಲ್ಲಿ ಕೆಲಸಮಯಗಳ ಹಿಂದಷ್ಟೇ ಆರಂಭಗೊಂಡ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ವಾರದ ಹಿಂದೆ ಡಾ.ಶರತ್ ಶೆಟ್ಟಿಯವರು ಸಿಬಿಸಿ ರಕ್ತ ಪರೀಕ್ಷೆ ಮಾಡಿಸಲು ಬಂದಿದ್ದರು.
ರಕ್ತ ಪರೀಕ್ಷೆ ಮಾಡಿದ ವರದಿಯನ್ನು ಡಾ.ಶರತ್ ಶೆಟ್ಟಿಯವರ ವಾಟ್ಸಾಪ್ ಗೆ ಲ್ಯಾಬೋರೇಟರಿಯವರು ಕಳಿಸಿದ್ದರು. ವರದಿಯಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕೇವಲ 18,000ದಾಖಲಾಗಿತ್ತು. ಆತಂಕಗೊಂಡ ವೈದ್ಯ ಶರತ್ ಅವರು ತಕ್ಷಣವೇ ಅನುಮಾನಗೊಂಡು ವಿಟ್ಲದಲ್ಲಿರುವ ಧನ್ವಂತರಿ ಲ್ಯಾಬೋರೇಟರಿಗೆ ತೆರಳಿ ಪರೀಕ್ಷೆ ಮಾಡಿಸಿದ್ದರು. ಅಲ್ಲಿನ ವರದಿಯಲ್ಲಿ ಪ್ಲೇಟ್ಲೆಟ್ ಸಂಖ್ಯೆ 1,13,000 ಕಂಡು ಬಂದಿತ್ತು. ಇದಲ್ಲದೇ ವಿ ಕೇರ್ ಎಂಬ ಇನ್ನೊಂದು ಲ್ಯಾಬ್ ನಲ್ಲಿಯೂ ಪರೀಕ್ಷೆ ಮಾಡಿಸಿದಾಗ ಅಲ್ಲೂ ಒಂದು ಲಕ್ಷಕ್ಕಿಂತ ಅಧಿಕ ಪ್ಲೇಟ್ಲೆಟ್ ಸಂಖ್ಯೆ ಕಂಡುಬಂದಿದೆ.
ಇದರಿಂದಾಗಿ ನಿಟ್ಟುಸಿರು ಬಿಟ್ಟ ವೈದ್ಯ ಶರತ್ ಶೆಟ್ಟಿಯವರು ರಕ್ಷಾ ಲ್ಯಾಬೋರೇಟರಿ ಸಿಬ್ಬಂದಿಗಳು ಮತ್ತು ಮಾಲಿಕನಲ್ಲಿ ವಿಚಾರಿಸಿದ್ಧಲ್ಲದೇ ಪರೀಕ್ಷೆ ವರದಿಗೆ ಸಹಿ ಹಾಕದೇ ಕಳುಹಿಸಿದ ಬಗ್ಗೆ ಪ್ರಶ್ನಿಸಿದ್ದಾರೆ.
ಯಾವುದೇ ವೈದ್ಯಕೀಯ ಪರೀಕ್ಷಾ ವರದಿಗಳಲ್ಲಿ ಲ್ಯಾಬೋರೇಟರಿ ಸಿಬ್ಬಂದಿಗಳು ಸಹಿ ಮಾಡಬೇಕೆಂಬ ಕನಿಷ್ಠ ಜ್ಞಾನವೂ ರಕ್ಷಾ ಲ್ಯಾಬ್ ಸಿಬ್ಬಂದಿಗಳಿಗೆ ಇಲ್ಲದಿರುವುದು ಅವರ ಗೋಲ್ಮಾಲ್ ಬುದ್ಧಿಗೆ ಪುಷ್ಟಿ ನೀಡುತ್ತಿದೆ.
ಈ ಬಗ್ಗೆ ಶರತ್ ಶೆಟ್ಟಿಯವರು ವಿಟ್ಲ ಪೊಲೀಸ್ ಠಾಣೆಗೆ ಮತ್ತು ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ದಾಖಲೆಗಳ ಸಹಿತ ಲಿಖಿತ ದೂರು ನೀಡಿದ್ದರು.
ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಅನುಷ್ಠಾನ ಅಧಿಕಾರಿಗಳ ನೇತೃತ್ವದ ತಂಡ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ದಾಳಿ ನಡೆಸಿದೆ.
ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ Karnataka Private Medical Establishment Act ಪ್ರಕಾರ ಅನುಮತಿ ಪಡೆದಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಬೀಗ ಜಡಿದು ಮುಂದಿನ ಕಾನೂನು ಕ್ರಮಕ್ಕಾಗಿ ವರದಿ ಕಳಿಸುತ್ತೇವೆ ಎಂದು ದಾಳಿ ನಡೆಸಿದ ಬಳಿಕ ಅಧಿಕಾರಿಗಳ ತಂಡ ಪ್ರತಿಕ್ರಿಯೆ ನೀಡಿದೆ.



