Home Crime ಮಂಗಳೂರು: ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ಬಜಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ…!!

ಮಂಗಳೂರು: ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ಬಜಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬಜಪೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ

ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿದ್ದ ಹಣವನ್ನು ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ 25,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಪೈಕಿ ಈಗಾಗಲೇ 15,000 ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಇನ್ನೂ 5,000 ರೂ. ಹೆಚ್ಚುವರಿಯಾಗಿ ಕೇಳಿದ್ದಕ್ಕೆ ಬೇಸತ್ತ ಸಂತ್ರಸ್ತರು ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಸೆ.21 ರಂದು ಸಂಜೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಹಾಕಿ, ದೂರುದಾರರಿಂದ 5,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಸದ್ಯ ಲೋಕಾಯುಕ್ತ ಪೊಲೀಸರು ಇನ್ಸ್‌ಪೆಕ್ಟರ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಹಿನ್ನೆಲೆ ವಿವಾದ ಇನ್ಸ್‌ಪೆಕ್ಟರ್ ಬಾಲಕೃಷ್ಣ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗಲೂ ಭ್ರಷ್ಟಾಚಾರ ಆರೋಪ ಎದುರಿಸಿದ್ದರು ಎನ್ನಲಾಗಿದೆ. ಉಳ್ಳಾಲದ ಪ್ರಕರಣವೊಂದರಲ್ಲಿ ದೂರುದಾರರಿಂದ 3 ಲಕ್ಷ ರೂ. ಪಡೆದ ಆರೋಪ ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ.