ಹೊಸದಿಲ್ಲಿ: ಪೊಲೀಸರ ಸೋಗಿನಲ್ಲಿ ಬಂದ ಮೂವರು ಅಪರಿಚಿತರು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ದಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ದೂರಿನ ಪ್ರಕಾರ, ಸಂತ್ರಸ್ತ ಬಾಲಕಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ತನ್ನ 17 ವರ್ಷದ ಸ್ನೇಹಿತನೊಂದಿಗೆ ಕಲ್ಕಾಜಿ ಮಂದಿರಕ್ಕೆ ತೆರಳಿದ್ದಳು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಇಬ್ಬರೂ ಸಂಜೆ 7.30ರ ಸುಮಾರಿಗೆ ದೇವಾಲಯದ ಸಮೀಪದ ಉದ್ಯಾನವನಕ್ಕೆ ತೆರಳಿದ್ದರು.
ಈ ವೇಳೆ ಸುಮಾರು 25ರಿಂದ 30 ವರ್ಷ ವಯಸ್ಸಿನ ಮೂವರು ಅಪರಿಚಿತ ವ್ಯಕ್ತಿಗಳು ಇವರ ಬಳಿ ಬಂದು, ತಾವು ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಇಬ್ಬರಿಗೂ ಬೆದರಿಕೆ ಹಾಕಿದ ಆರೋಪಿಗಳು, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಕಾಜಿ ಮಂದಿರ ಮತ್ತು ಇಸ್ಕಾನ್ ದೇವಾಲಯವನ್ನು ಸಂಪರ್ಕಿಸುವ ಉದ್ಯಾನವನದಲ್ಲಿ ಘಟನೆ ನಡೆದಿದ್ದು, ರಾತ್ರಿ 8.45ರ ಸುಮಾರಿಗೆ ಪಿಸಿಆರ್ ಕರೆ ಬಂದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ದಿಲ್ಲಿ ನಿವಾಸಿಯಾಗಿರುವ ಸಂತ್ರಸ್ತೆಯನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.




