Home Crime ಕುಂದಾಪುರ: ಶಕ್ತಿ ಯೋಜನೆ ಟಿಕೆಟ್ ವಿಚಾರದಲ್ಲಿ KSRTC ನಿರ್ವಾಹಕನ ಮೇಲೆ ಹಲ್ಲೆ – ಪ್ರಕರಣ ದಾಖಲು…!!

ಕುಂದಾಪುರ: ಶಕ್ತಿ ಯೋಜನೆ ಟಿಕೆಟ್ ವಿಚಾರದಲ್ಲಿ KSRTC ನಿರ್ವಾಹಕನ ಮೇಲೆ ಹಲ್ಲೆ – ಪ್ರಕರಣ ದಾಖಲು…!!

ಕುಂದಾಪುರ: ಬಸ್ ನಿಲುಗಡೆ ವಿಚಾರದಲ್ಲಿ KSRTC ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ದೂರುದಾರ ಲಕ್ಷ್ಮಣ ನಾರಾಯಣ ನಾಯ್ಕ್ (49), ಬಾಡಾ ಜೇಷ್ಠಾಪುರ, ಕುಮಟಾ, KSRTC ಬಸ್ ಚಾಲಕ.

ಘಟನೆ ವಿವರ:
ನ.05 ರಂದು ಬೆಳಗ್ಗೆ 6 ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ KA-19 F-3198 ಬಸ್‌ನಲ್ಲಿ ನಿರ್ವಾಹಕ ಮಂಜುನಾಥ ಮಡಿವಾಳ ಜೊತೆ ಕುಂದಾಪುರಕ್ಕೆ ಬಂದಿದ್ದರು. ಬಳಿಕ ಬೆಳಗ್ಗೆ 9:05ಕ್ಕೆ ಕುಂದಾಪುರದಿಂದ ಪ್ರಯಾಣಿಕರನ್ನು ಕರೆದುಕೊಂಡು ಭಟ್ಕಳಕ್ಕೆ ಹೋಗಿ, 10:50ಕ್ಕೆ ಭಟ್ಕಳದಿಂದ ಕುಂದಾಪುರಕ್ಕೆ ಹೊರಟಿದ್ದರು.

ಶಿರೂರು ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಬಸ್ ಹತ್ತಿ ಕುಂದಾಪುರಕ್ಕೆ ಶಕ್ತಿ ಯೋಜನೆಯಲ್ಲಿ ಟಿಕೆಟ್ ಪಡೆದಿದ್ದರು. ಉಪ್ಪುಂದ ಸಮೀಪ ಬಸ್ ನಿಲ್ಲಿಸಲು ಕೇಳಿದಾಗ ನಿರ್ವಾಹಕ ಮಂಜುನಾಥ್, “ಶಕ್ತಿ ಯೋಜನೆಯಲ್ಲಿ ಟಿಕೆಟ್ ಪಡೆದಿದ್ದು, ನಿಯಮದಂತೆ ಎಲ್ಲಿಗೆ ಟಿಕೆಟ್ ಮಾಡಿದ್ದೀರೋ ಅಲ್ಲೇ ಇಳಿಯಬೇಕು, ಮಧ್ಯದಲ್ಲಿ ಇಳಿಯಬಾರದು” ಎಂದು ಹೇಳಿದ್ದರು.

ಮಧ್ಯಾಹ್ನ 12:15ಕ್ಕೆ ಬಸ್ ಕುಂದಾಪುರ KSRTC ಬಸ್ ನಿಲ್ದಾಣ ತಲುಪಿದಾಗ ಮಹಿಳೆಯರು ಅಲ್ಲೇ ಇಳಿದಿದ್ದರು. ಚಾಲಕ ಬಸ್ ಅನ್ನು ಹೊಸ ಬಸ್ ನಿಲ್ದಾಣಕ್ಕೆ ತಂದು ನಿಲ್ಲಿಸಿದಾಗ ಮಧ್ಯಾಹ್ನ 12:20ಕ್ಕೆ ಆರೋಪಿಗಳು ಬಸ್ಸಿನ ಮುಂದಿನ ಬಾಗಿಲಿನಿಂದ ಹತ್ತಿ, ನಿರ್ವಾಹಕ ಮಂಜುನಾಥ್ ಅವರ ಯೂನಿಫಾರ್ಮ್ ಶರ್ಟ್ ಕಾಲರ್ ಹಿಡಿದು “ಉಪ್ಪುಂದದಲ್ಲಿ ನಮ್ಮ ಮನೆಯವರಿಗೆ ಏಕೆ ಬಸ್ ನಿಲ್ಲಿಸಲಿಲ್ಲ” ಎಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದಿದ್ದಾರೆ.

ತಪ್ಪಿಸಲು ಹೋದ ಚಾಲಕ ಲಕ್ಷ್ಮಣ್ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದು, ಅವರು ಮೊಬೈಲ್‌ನಲ್ಲಿ ಫೋಟೋ ತೆಗೆಯಲು ಹೋದಾಗ ಮೊಬೈಲ್ ಬಿಸಾಡಿ ಆರೋಪಿಗಳು ಅಲ್ಲಿಂದ ಹೋಗಿದ್ದಾರೆ.

ಸರ್ಕಾರಿ ಕರ್ತವ್ಯದಲ್ಲಿದ್ದ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ  ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.