Home Crime ಕಾರ್ಕಳ: ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು…!!

ಕಾರ್ಕಳ: ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು…!!

ಕಾರ್ಕಳ: ಅಡಿಕೆ ಕಾಯಿ ಕೊಯ್ಯುವ ವೇಳೆ ಅಡಿಕೆ ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪರ್ಪಲೆಯಲ್ಲಿ ನಡೆದಿದೆ.

ಮೃತರನ್ನು ಜೋಸೆಫ್ ಡಿಸೋಜ ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 21ರಂದು ಮಧ್ಯಾಹ್ನ 1.10ರ ಸುಮಾರಿಗೆ ಸ್ಟಾನ್ಲಿ ಡಿಸೋಜ ಅವರ ತೋಟದಲ್ಲಿ ಅಡಿಕೆ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ವೇಳೆ ಜೋಸೆಫ್ ಡಿಸೋಜ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ಕುತ್ತಿಗೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಗಾಗಿ ಅವರ ಪುತ್ರ ಅರುಣ್ ಜೋಯಲ್ ಡಿಸೋಜ ಹಾಗೂ ಜಾಗದ ಮಾಲೀಕ ಸ್ಟಾನ್ಲಿ ಡಿಸೋಜ ಅವರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.

ಅಡಿಕೆ ಮರ ಹತ್ತುವ ವೇಳೆ ಸುರಕ್ಷತಾ ಬೆಲ್ಟ್, ಹೆಲ್ಮೆಟ್ ಹಾಗೂ ಹಗ್ಗ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸದೆ, ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣ ಎಂದು ಆರೋಪಿಸಿ ಮೃತರ ಪುತ್ರ ದೂರು ನೀಡಿದ್ದಾರೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.