Home Latest ಉಚ್ಚಿಲ ದಸರಾ ಸಂಪನ್ನ : ಅದ್ಧೂರಿ ಶಾರದಮ್ಮನ ಮೆರವಣಿಗೆ…!!

ಉಚ್ಚಿಲ ದಸರಾ ಸಂಪನ್ನ : ಅದ್ಧೂರಿ ಶಾರದಮ್ಮನ ಮೆರವಣಿಗೆ…!!

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.11 ರಿಂದ ನಡೆದ ಐದನೇ ವರ್ಷದ ಉಡುಪಿ-ಉಚ್ಚಿಲ ದಸರಾ-2026 ಮಹೋತ್ಸವ ವಿಜಯದಶಮಿಯಂದು ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಗೆ ಶಾಸ್ತ್ರೋಕ್ತ ಪೂಜೆ ನೆರವೇರಿತು. ವಿಜಯದಶಮಿಯಂದು ಬೆಳಿಗ್ಗೆ ಉದಯಪೂಜೆ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಚಂಡಿಕಾಯಾಗ, ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಸರ್ಜನಾ ಪೂಜೆ ಬಳಿಕ ದೇವಳದ ಗೋಪುರದ ಮುಂಭಾಗದಲ್ಲಿ ಅಂಬಾರಿ ಹೊತ್ತ ಆನೆಯ ಟ್ಯಾಬ್ಲೋಗೆ ಪುಷ್ಪಾರ್ಚನೆ ನಡೆಸುವ ಮೂಲಕ ದಸರಾ ರೂವಾರಿ ಜಿ.ಶಂಕರ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಡ್ರೋನ್ ಮೂಲಕ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳಿಗೆ ಪುಷ್ಪವೃಷ್ಟಿ ಮಾಡಲಾಯಿತು.

ಮಹಾಲಕ್ಷ್ಮಿ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳು, ಉಚ್ಚಿಲ, ಮೂಳೂರು ಮಾರ್ಗವಾಗಿ ಕಾಪು ಬೀಚ್ ದೀಪಸ್ತಂಭದವರೆಗೆ ಶೋಭಾಯಾತ್ರೆ ಸಾಗಿತು. ಕಾಪು ಸಮುದ್ರದಲ್ಲಿ ವಿಶೇಷ ಗಂಗಾರತಿ, ವಿದ್ಯುದ್ದೀಪಾಲಂಕಾರ, ಸಿಡಿಮದ್ದು ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿ ಜಿ ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ,ವಿನಯ್ ಕರ್ಕೇರ, ರತ್ನಾಕರ ಸಾಲ್ಯಾನ್,ಶರಣ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.