Home Crime ಕಾಪು: ನೇಣು ಬಿಗಿದು ರಿಕ್ಷಾ ಚಾಲಕ ಆತ್ಮಹತ್ಯೆ…!!

ಕಾಪು: ನೇಣು ಬಿಗಿದು ರಿಕ್ಷಾ ಚಾಲಕ ಆತ್ಮಹತ್ಯೆ…!!

ಕಾಪು: ಮದ್ಯಪಾನದ ಚಟ ಹೊಂದಿದ್ದ 44 ವರ್ಷದ ರಿಕ್ಷಾ ಚಾಲಕರೊಬ್ಬರು ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪ್ರಾಣೇಶ್ (44) ಎಂದು ತಿಳಿಯಲಾಗಿದೆ.

ಅವರು ಸುಭಾಷ್ ನಗರ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 30 ವರ್ಷಗಳಿಂದ ವಿಪರೀತ ಮದ್ಯಪಾನದ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 20ರಂದು ಬೆಳಗ್ಗೆ 9 ಗಂಟೆಯಾದರೂ ಪ್ರಾಣೇಶ್ ಅವರು ವಾಸವಿದ್ದ ಕೊಠಡಿಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಯಶಸ್ವಿನಿ ಅವರು ನೆರೆಹೊರೆಯವರ ಸಹಾಯದಿಂದ ಕೊಠಡಿಯ ಬಾಗಿಲು ತೆರೆದು ನೋಡಿದ್ದಾರೆ. ಈ ವೇಳೆ ಪ್ರಾಣೇಶ್ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ.

ಸೆಪ್ಟೆಂಬರ್ 19ರಂದು ಮಧ್ಯಾಹ್ನ 1 ಗಂಟೆಯಿಂದ ಸೆಪ್ಟೆಂಬರ್ 20ರ ಬೆಳಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಮದ್ಯಪಾನದ ಚಟದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.