Home Crime ಕಾಪು: ಕೀಟನಾಶಕ ಸೇವನೆ ಶಂಕೆ : 74 ವರ್ಷದ ವೃದ್ಧ ಸಾವು…!!

ಕಾಪು: ಕೀಟನಾಶಕ ಸೇವನೆ ಶಂಕೆ : 74 ವರ್ಷದ ವೃದ್ಧ ಸಾವು…!!

ಕಾಪು: ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ 74 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ಮಜೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ರಾಮಣ್ಣ ಶೆಟ್ಟಿ ಎಂದು ತಿಳಿದು ಬಂದಿದೆ.

ಕಳೆದ ಐದು ವರ್ಷಗಳಿಂದ ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆ ಹಾಗೂ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಅವರು ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 3ರಂದು ಮನೆಯ ಹೊರಭಾಗದ ಕೊಟ್ಟಿಗೆಯಲ್ಲಿ ಕೃಷಿ ಬಳಕೆಗೆ ಇಟ್ಟಿದ್ದ ಕೀಟನಾಶಕವನ್ನು ರಾಮಣ್ಣ ಶೆಟ್ಟಿ ಅಲ್ಪ ಪ್ರಮಾಣದಲ್ಲಿ ಸೇವಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಅವರ ಚಿಕ್ಕಪ್ಪ ದಯಾನಂದ ಶೆಟ್ಟಿ ಕೂಡಲೇ ಬಾಟಲಿಯನ್ನು ಕಿತ್ತುಕೊಂಡಿದ್ದು, ಅಲ್ಪ ಪ್ರಮಾಣದ ಕೀಟನಾಶಕ ಬಾಯಿಗೆ ಹೋಗಿತ್ತು.ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಸೆಪ್ಟೆಂಬರ್ 19ರಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ರಾತ್ರಿ ಸುಮಾರು 11 ಗಂಟೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ರಾಮಣ್ಣ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮಾನಸಿಕ ಖಿನ್ನತೆಯಿಂದ ಕೀಟನಾಶಕ ಸೇವಿಸಿರುವುದರಿಂದ ಅಥವಾ ಅನಾರೋಗ್ಯದ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.