Home Crime ಅಪ್ರಾಪ್ತ ಚಲಾಯಿಸಿದ್ದ ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಪ್ರಕರಣ : ಬಾಲಕನ ಸಹೋದರನಿಗೆ ಶಿಕ್ಷೆ,...

ಅಪ್ರಾಪ್ತ ಚಲಾಯಿಸಿದ್ದ ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಪ್ರಕರಣ : ಬಾಲಕನ ಸಹೋದರನಿಗೆ ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ…!!

ಬೆಳ್ತಂಗಡಿ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸ್ಕೂಟ‌ರ್ ಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ನೀಡಿದ ಆತನ ಸಹೋದರನಿಗೆ 35 ಸಾವಿರ ರೂ ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಧೀಶರು ಅಪಘಾತ ನಡೆಸಿದ್ದ ಬಾಲಕನಿಗೆ 25 ವರ್ಷ ಆಗುವವರೆಗೆ ಚಾಲನಾ ಪರವಾನಿಗೆ ನೀಡದಂತೆ ಆರ್.ಟಿ.ಗೆ. ಸೂಚನೆ ನೀಡಿದ್ದಾರೆ.

ಅಲ್ಲದೆ ಅಪಘಾತ ನಡೆದ ಬೈಕಿನ ನೋಂದಣಿ ಪತ್ರವನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ:2024ರ ಜುಲೈ 20ರಂದು ರಾತ್ರಿ 7.30ರ ವೇಳೆಗೆ ಅಪ್ರಾಪ್ತ ಬಾಲಕ ಕೆ.ಎ. 21 ಇ.ಇ. 3296 ನಂಬರಿನ ಯಮಹಾ ಎಫ್.ಝಡ್. ಬೈಕನ್ನು ಚಲಾಯಿಸಿಕೊಂಡು ಕಕ್ಯಪದವು-ಕಲ್ಲೇರಿ ಸಾರ್ವಜನಿಕ ಡಾಂಬಾರು ರಸ್ತೆಯ ಮೂರುಗೋಳಿ ಕಡೆಯಿಂದ ಕಲ್ಲೇರಿ ಕಡೆಗೆ ಚಲಾಯಿಸಿಕೊಂಡು ಹೋಗಿದ್ದ.

ಕರಾಯ ಗ್ರಾಮದ ತುರ್ಕಳಿಕೆ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದ ಬಾಲಕ ಕಲ್ಲೇರಿ ಕಡೆಯಿಂದ ಮೂರುಗೋಳಿ ಕಡೆಗೆ ಹೋಗುತ್ತಿದ್ದ ಕೆ.ಎ.19 ಡಬ್ಲ್ಯು 7247 ನೋಂದಣಿ ನಂಬರಿನ ಸ್ಕೂಟರಿಗೆ ಅಪಘಾತ ಉಂಟು ಮಾಡಿದ್ದ. ಇದರ ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಶಿವಾನಂದ ಅವರು ಮೃತಪಟ್ಟಿದ್ದರು. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಪುತ್ತೂರು ಪೊಲೀಸ್ ನಿರೀಕ್ಷಕ ಸತೀಶ್ ಜಿ.ಜೆ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳ್ತಂಗಡಿಯ ಹಿರಿಯ ಮತ್ತು ಜೆ.ಎಂ.ಎಫ್.ಸಿ.ಯ ನ್ಯಾಯಾಧೀಶ ಮನು ಬಿ.ಕೆ. ಅವರು ಅಪ್ರಾಪ್ತ ಬಾಲಕನಿಗೆ ಮೋಟಾರ್ ಬೈಕ್ ಚಲಾಯಿಸಲು ನೀಡಿದ ಮೋಟಾರ್ ಬೈಕ್ ಮಾಲಕರಾದ ತಣ್ಣೀರುಪಂತದ ಅಬ್ದುಲ್ ಹಕೀಮ್ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದಾರೆ.

ಅಪ್ರಾಪ್ತ ಬಾಲಕನ ಅಣ್ಣ ನಾಗಿರುವ ಆರ್.ಸಿ ಮಾಲೀಕ ಅಬ್ದುಲ್ ಹಕೀಂ ಗೆ 35,000 ರೂ. ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಧೀಶರುK.A 21 ಇ.ಇ. 3296 ನಂಬರಿನ ವಾಹನದ ನೋಂದಣಿ ಪತ್ರವನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಅಪ್ರಾಪ್ತ ಬಾಲಕನಿಗೆ 25 ವರ್ಷವಾಗುವ ತನಕ ಚಾಲನಾ ಪರವಾನಿಗೆ ನೀಡಬಾರದು ಎಂದು ನ್ಯಾಯಾಧೀಶರು ಆ‌ರ್.ಟಿ.ಓ.ಗೆ ಸೂಚಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.