Home Crime ಕುಂದಾಪುರ: ₹1,800 ಸಾಲದ ಕಂತಿಗಾಗಿ ಜಾಮೀನುದಾರನ ಅಪಹರಣ : ಕಬ್ಬಿಣದ ರಾಡ್‌ನಿಂದ ಹಲ್ಲೆ…!!

ಕುಂದಾಪುರ: ₹1,800 ಸಾಲದ ಕಂತಿಗಾಗಿ ಜಾಮೀನುದಾರನ ಅಪಹರಣ : ಕಬ್ಬಿಣದ ರಾಡ್‌ನಿಂದ ಹಲ್ಲೆ…!!

ಕುಂದಾಪುರ: ಕೇವಲ ₹1,800 ಸಾಲದ ಕಂತು ಬಾಕಿ ಇದೆ ಎಂಬ ಕಾರಣಕ್ಕೆ ಸಾಲದ ಜಾಮೀನುದಾರನನ್ನು ಕಾರಿನಲ್ಲಿ ಅಪಹರಿಸಿ, ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಬೈಕ್‌ ಎತ್ತೊಯ್ದಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್ ನಾಯ್ಕ್ ಅಪಹರಣಕ್ಕೆ ಒಳಗಾದ ಸಾಲದ ಜಾಮೀನುದಾರ

ಮೂಲ್ಕಿ ಮೂಲದ ‘ಸಾನಿಧ್ಯ ಫೈನಾನ್ಸ್‌’ ಸಂಸ್ಥೆಯಿಂದ ದೂರುದಾರ ರಾಜೇಶ್ ನಾಯ್ಕ್ ಸ್ನೇಹಿತ ಗಣೇಶ್ 2026ರ ಫೆಬ್ರವರಿ ತಿಂಗಳಲ್ಲಿ ತಮ್ಮ ತಾಯಿಯ ಚಿಕಿತ್ಸೆಗಾಗಿ ₹20,000 ಸಾಲ ಪಡೆದಿದ್ದರು.

ಈ ಸಾಲಕ್ಕೆ ರಾಜೇಶ್ ನಾಯ್ಕ್ ಜಾಮೀನುದಾರರಾಗಿ ಸಹಿ ಮಾಡಿದ್ದರು. ಅವರು ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಾ ಬಂದಿದ್ದು, 2026ರ ಜುಲೈ ತಿಂಗಳ ಕಂತಿನಲ್ಲಿ ಕೇವಲ ₹1,800 ಹಣ ಪಾವತಿಸಲು ಬಾಕಿ ಇತ್ತು. ಈ ಬಾಕಿ ಹಣಕ್ಕಾಗಿ ಫೈನಾನ್ಸ್ ಸಂಸ್ಥೆಯವರು ಸತತವಾಗಿ ಕೆಟ್ಟದಾಗಿ ಬೈದು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.

ಜುಲೈ 31ರಂದು ಮಧ್ಯಾಹ್ನ ವೇಳೆಗೆ ರಾಜೇಶ್ ನಾಯ್ಕ್ ಬ್ರಹ್ಮಾವರ ಬಳಿ ಬಾ‌ರ್ ಒಂದರ ಎದುರು ನಿಂತಿದ್ದಾಗ, ಬಿಳಿ ಬಣ್ಣದ ಈಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಸಂದೀಪ್ ಶೆಟ್ಟಿ ಹಾಗೂ ಆತನ ಜೊತೆಗಿದ್ದ 7 ಸಹಚರರ ತಂಡ ಅವರನ್ನು ಬಲವಂತವಾಗಿ ಕಾರಿಗೆ ತುಂಬಿ ಕರೆದೊಯ್ದಿದೆ. ಚಲಿಸುವ ಕಾರಿನಲ್ಲಿ ಸಂದೀಪ್ ಶೆಟ್ಟಿ ಕಬ್ಬಿಣದ ರಾಡ್‌ನಿಂದ ಹಾಗೂ ಇತರರು ಕೈಯಿಂದ ರಾಜೇಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಸಾಲಗಾರ ಗಣೇಶ್ ಎಲ್ಲಿದ್ದಾನೆ ಎಂದು ಗದರಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ರಾಜೇಶ್ ಆವರ ಬೈಕ್ ನ ಮಾಹಿತಿ ಪಡೆದು ಅದನ್ನು ಗೂಡ್ಸ್ ರಿಕ್ಷಾದಲ್ಲಿ ಎತ್ತಾಕಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡ ದೂರುದಾರ ರಾಜೇಶ್ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.