Home Crime ಮಲ್ಪೆ: ಮೀನು ವ್ಯಾಪಾರದಲ್ಲಿ ₹10.11 ಲಕ್ಷ ವಂಚನೆ ಆರೋಪ…!!

ಮಲ್ಪೆ: ಮೀನು ವ್ಯಾಪಾರದಲ್ಲಿ ₹10.11 ಲಕ್ಷ ವಂಚನೆ ಆರೋಪ…!!

ಮಲ್ಪೆ: ಮೀನು ವ್ಯಾಪಾರ ಸಂಸ್ಥೆಯೊಂದಕ್ಕೆ ಸೇರಿದ ₹10.11 ಲಕ್ಷಕ್ಕೂ ಅಧಿಕ ಹಣವನ್ನು ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲದ ಪ್ರಗತಿ ನಗರದ 63 ವರ್ಷದ ಜೋನ್ಸನ್ ಅವರು ಮಲ್ಪೆಯಲ್ಲಿ “ರೆಹಬೊತ್ ಸೀಫುಡ್” ಹೆಸರಿನಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದರು.

ಮಲ್ಪೆ ಬಂದರಿನಿಂದ ಮೀನು ಖರೀದಿಸಿ ತಮಿಳುನಾಡಿನ ವಿವಿಧ ಗ್ರಾಹಕರಿಗೆ ಕಳುಹಿಸುತ್ತಿದ್ದರು.

ಪಿರ್ಯಾದಿದಾರರ ಬಳಿ ಕೆಲಸ ಮಾಡುತ್ತಿದ್ದ ವಿನು ವಿ.ಎಸ್. ಎಂಬಾತ ಮೀನು ವ್ಯಾಪಾರ, ಗ್ರಾಹಕರ ಸಂಪರ್ಕ ಹಾಗೂ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
2025ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿನ ಕೋಟಿ ಪಟ್ಟಿನಂನಲ್ಲಿರುವ ಜೆ.ಆರ್.ಜೆ. ಫುಡ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಗೆ ₹16 ಲಕ್ಷಕ್ಕೂ ಅಧಿಕ ಮೌಲ್ಯದ ಮೀನು ಕಳುಹಿಸಲಾಗಿತ್ತು. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯಿಂದ ಪಿರ್ಯಾದಿದಾರರಿಗೆ ಪಾವತಿಯಾಗಬೇಕಿದ್ದ ಹಣದಲ್ಲಿ ₹10,11,450 ಅನ್ನು ಆರೋಪಿ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಪಿರ್ಯಾದಿದಾರರಿಗೆ ಯಾವುದೇ ಮಾಹಿತಿ ನೀಡದೆ ಆರೋಪಿ ಪರಾರಿಯಾಗಿದ್ದು, ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು.
ನ್ಯಾಯಾಲಯದ ಖಾಸಗಿ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.