Home Crime ಮಂಗಳೂರು : ಮಕ್ಕಳ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿತ ಆರೋಪ : ಸಾಗರದ ಶಾಲೆಯಲ್ಲಿ ಶಿಕ್ಷಕಿಯ...

ಮಂಗಳೂರು : ಮಕ್ಕಳ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿತ ಆರೋಪ : ಸಾಗರದ ಶಾಲೆಯಲ್ಲಿ ಶಿಕ್ಷಕಿಯ ವಿರುದ್ಧ ಆಕ್ರೋಶ…!!

ಶಿವಮೊಗ್ಗ : ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂದು ಪ್ರಾಥಮಿಕ ಶಾಲೆಯ ಮೂವರು ಪುಟ್ಟ ಮಕ್ಕಳಿಗೆ ಅತಿಥಿ ಶಿಕ್ಷಕಿಯೊಬ್ಬರು ಕೋಲಿನಿಂದ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

2, 3 ಹಾಗೂ 4ನೇ ತರಗತಿಯಲ್ಲಿ ಓದುತ್ತಿರುವ ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದ್ದು, ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬರುವಷ್ಟರ ಮಟ್ಟಿಗೆ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ರಕ್ಷಿತಾ ಎಂಬ ಅತಿಥಿ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಶಾಲೆಯಿಂದ ಮನೆಗೆ ತೆರಳಿದ ಮಕ್ಕಳ ಬೆನ್ನಿನ ಗಾಯಗಳನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ. ಬಳಿಕ ಘಟನೆ ಬಗ್ಗೆ ಗ್ರಾಮಸ್ಥರ ಗಮನಕ್ಕೂ ತಂದಿದ್ದಾರೆ.

ಮಕ್ಕಳಿಗೆ ಅಕ್ಷರ ಹಾಗೂ ಜ್ಞಾನ ಕಲಿಸಬೇಕಾದ ಶಿಕ್ಷಕಿಯಿಂದಲೇ ಇಂತಹ ಅಮಾನವೀಯ ಕೃತ್ಯ ನಡೆದಿದೆ ಎಂಬ ಆರೋಪಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿದ್ದು, ಆರೋಪಿತ ಶಿಕ್ಷಕಿ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಕ್ಕಳ ಮೇಲೆ ನಡೆದಿರುವ ಆರೋಪಿತ ಹಲ್ಲೆ ಕುರಿತು ಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.